ಕಾರ್ಕಳ: ವಿಶ್ವಸಂಸ್ಥೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಏಕೈಕ ಸರ್ಕಾರೇತರ ಸಂಸ್ಥೆಯಾಗಿರುವ ಲಯನ್ಸ್ ಕ್ಲಬ್ ಇಂದು ಜಗತ್ತಿನಾದ್ಯಂತ ಸುಮಾರು 210 ರಾಷ್ಟ್ರಗಳಲ್ಲಿ 48 ಸಾವಿರ ಕ್ಲಬ್ ಹೊಂದಿದ್ದು,ಸುಮಾರು 13 ಲಕ್ಷ ಕ್ಕೂ ಮಿಕ್ಕಿ ಸದಸ್ಯರನ್ನೊಳಗೊಂಡಿದೆ.ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ನಡೆಸುವ ಜತೆಗೆ ನೊಂದವರ ಅಶಕ್ತರ ಬದುಕಿಗೆ ಆಸರೆ ಕಲ್ಪಿಸುವುದೇ ಲಯನ್ಸ್ ಕ್ಲಬ್ ನ ಮೂಲ ಉದ್ದೇಶವಾಗಿದೆ ಎಂದು ಲಯನ್ಸ್ ಕ್ಲಬ್ ಪ್ರಾಂತೀಯ ಮಾಜಿ ಅಧ್ಯಕ್ಷ ಮುನಿಯಾಲು ಶಂಕರ ಶೆಟ್ಟಿ ಹೇಳಿದರು.
ಅವರು ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮೂರೂರಿನಲ್ಲಿ ಶನಿವಾರ ಅಜೆಕಾರು ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿ,
ಭಾರತದಲ್ಲಿ ಸುಮಾರು 6335 ಕ್ಲಬ್ ಗಳಿದ್ದು ಸುಮಾರು 2.35 ಲಕ್ಷಕ್ಕೂ ಮಿಕ್ಕಿ ಸದಸ್ಯರಿದ್ದು,ಭಾರತ ಅತ್ಯಧಿಕ ಕ್ಲಬ್ ಹೊಂದಿರುವ ಜಗತ್ತಿನ ನಂಬರ್ ವನ್ ದೇಶವಾಗಿದೆ ಎಂದರು.
ಜಗತ್ತಿನ ಯಾವುದೇ ದೇಶದಲ್ಲಿ ಬರಗಾಲ,ಪ್ರವಾಹ,ಕೋವಿಡ್ ನಂತಹ ಸಂದಿಗ್ದತೆ ಎದುರಾದಾಗ ಸದಾ ನೆರವಿನ ಹಸ್ತ ಚಾಚುವ ಏಕೈಕ ಸಂಸ್ಥೆ ಇದ್ದರೆ ಲಯನ್ಸ್ ಕ್ಲಬ್ ಮಾತ್ರ ಎಂದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ,ಲಯನ್ಸ್ ವಲಯಾಧ್ಯಕ್ಷ ಥಾಮಸ್ ಲೂಕಸ್, ಚಂದ್ರಹಾಸ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸೆಸ್ಸೆಲ್ಸಿ ಹಾಗೂ ಪಿಯುಸಿ ತರಗತಿಗಳಲ್ಲಿ ಗರಿಷ್ಟ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹೆರ್ಮುಂಡೆ ಅಂಗನವಾಡಿ ಮಕ್ಕಳಿಗೆ ಉಚಿತ ಕುರ್ಚಿ ವಿತರಣೆ,ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಅಜೆಕಾರು ಬೊಂಡುಕುಮೇರಿಯ ನಿವಾಸಿ ಮಂಜುಳಾ ಅವರಿಗೆ ಸಹಾಯಧನ ವಿತರಿಸಲಾಯಿತು.
ವೇದಿಕೆಯಲ್ಲಿ ಅಜೆಕಾರು ಲಯನ್ಸ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ,ಕಾರ್ಯದರ್ಶಿ ದಿನೇಶ್ ಕುಮಾರ್, ಕೋಶಾಧಿಕಾರಿ ದಿನೇಶ್ ಭಂಡಾರಿ,ಉಪಾಧ್ಯಕ್ಷ ಜಾಕೊಬ್ ಸೈಮನ್ ಉಪಸ್ಥಿತರಿದ್ದರು.
ನೂತನವಾಗಿ ಲಯನ್ಸ್ ಕ್ಲಬ್ ಸೇರಿದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ,ಕ್ಲಬ್ ನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು.ಕಾರ್ಯದರ್ಶಿ ದಿನೇಶ್ ಕುಮಾರ್ ವಂದಿಸಿದರು.
ಪ್ರೊ.ವೈ, ಪಾಂಡುರಂಗ ನಾಯಕ್ ಹಾಗೂ ಹೇಮಾ ದಿನೇಶ್ ಕಾರ್ಯಕ್ರಮ ನಿರೂಪಿಸಿದರು