Share this news

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ವಿವಾದಿತ ಎಪಿಎಂಸಿ ತಿದ್ದುಪಡಿ ವಿಧೇಯಕ ಹಿಂಪಡೆಯಲು ಮುಂದಾದ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2023ಕ್ಕೆ ವಿಧಾನ ಪರಿಷತ್‌ನಲ್ಲಿ ಅನುಮೋದನೆ ದೊರೆತಿಲ್ಲ. ಹೀಗಾಗಿ ಸದನ ಪರಿಶೀಲನಾ ಸಮಿತಿ ರಚಿಸಿ ಅದರ ಪರಿಶೀಲನೆಗೆ ವಹಿಸಲು ಒಪ್ಪಿಗೆ ಸೂಚಿಸಲಾಗಿದೆ.


ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿತ್ತು. ಬಿಜೆಪಿ ಶಾಸಕರ ತೀವ್ರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಅನುಮೋದನೆಯನ್ನೂ ಪಡೆದಿತ್ತು. ಆದರೆ, ಎಪಿಎಂಸಿ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರು ಒಪ್ಪಿಗೆ ನೀಡಿಲ್ಲ. ಜೆಡಿಎಸ್ ಕೂಡ ವಿರೋಧಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಜತೆಗೂಡಿ ವಿಧೇಯಕಕ್ಕೆ ಅನುಮೋದನೆ ಪಡೆಯುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನದ ಮತಕ್ಕೆ ಹಾಕಿದರು.

ವಿಧೇಯಕಕ್ಕೆ ಸದನ ಪರಿಶೀಲನಾ ಸಮಿತಿ ರಚಿಸಲು ಪರವಾಗಿ 31 ಮತಗಳು ಚಲಾವಣೆಯಾದರೆ, ಸದನ ಪರಿಶೀಲನಾ ಸಮಿತಿ ರಚಿಸಲು ವಿರೋಧಿಸಿ 21 ಮತಗಳು ಚಲಾವಣೆಗೊಂಡವು. ಬಳಿಕ ಸಭಾಪತಿ ಅವರು ವಿಧೇಯಕವನ್ನು ಸದನ ಪರಿಶೀಲನಾ ಸಮಿತಿಗೆ ಒಪ್ಪಿಸಿದರು.

Leave a Reply

Your email address will not be published. Required fields are marked *