Share this news

ಕಲಬುರಗಿ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಇಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಕಲಬುರಗಿ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮನೆಯ ದೀಪದ ಸ್ವಿಚ್ ಆನ್ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗೃಹಜ್ಯೋತಿ ಯೋಜನೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಾಂಕೇತಿಕವಾಗಿ 10 ಮಂದಿ ಫಲಾನುಭವಿಗಳಿಗೆ ಶೂನ್ಯ ದರದ ವಿದ್ಯುತ್ ಬಿಲ್ ವಿತರಿಸಲಾಯಿತು


ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಉಚಿತ ಬೆಳಕು ಸುಸ್ಥಿರ ಬದುಕು ಅನ್ನೋ ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ,ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದು ಶತಸಿದ್ಧ. ನಮ್ಮ ಸರ್ಕಾರದ 5 ವರ್ಷದ ಅವಧಿಯಲ್ಲಿ ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲಾ ಭರವಸೆ ಈಡೇರಿಸಲಿದೆ ಎಂದು ಸಿಎಂ ಭರವಸೆ ನೀಡಿದರು. ಬುದ್ಧ, ಬಸವ, ಅಂಬೇಡ್ಕರ, ಗಾಂಧಿ, ಕುವೆಂಪು ಅವರ ಆಶಯ ಮತ್ತು ತತ್ವದಂತೆ ನುಡಿದಂತೆ ನಡೆಯುತ್ತೇವೆ. ಇದುವೇ ಕರ್ನಾಟಕ ಮಾದರಿ ಆಡಳಿತ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದರು.


ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಮುಂದಿನ 5 ವರ್ಷದಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ 76 ಭರವಸೆಗಳನ್ನು ಈಡೇರಿಸಲಾಗುವುದು. ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳು ಸಮ-ಸಮನಾಗಿ ನಡೆಯಲಿವೆ. ಯಾವುದೇ ಅನುದಾನ ಕೊರತೆ ಇಲ್ಲ. ಇದರಲ್ಲಿ ಅನುಮಾನ ಬೇಡ ಎಂಬ ಸ್ಪಷ್ಟವಾದ ಭರವಸೆಯನ್ನು ಸಿಎಂ ನೀಡಿದರು.ಪಂಚ ಗ್ಯಾರಂಟಿ ಜಾರಿ ಬಗ್ಗೆ ವಿರೋಧ ಪಕ್ಷಗಳು ರಾಜ್ಯ ದಿವಾಳಿಯಾಗುತ್ತದೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಯೂರೋಪ್ ದೇಶದಲ್ಲಿನ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಆಧಾರದಲ್ಲಿ ಈ ಐದು ಗ್ಯಾರಂಟಿ ಜಾರಿಗೆ ತರಲಾಗುತ್ತಿದೆ.ಇದರಿಂದ ರಾಜ್ಯದ ದಿವಾಳಿಯಾಗಲ್ಲ, ಬದಲಾಗಿ ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಹೆಚ್ಚಲಿದೆ ಎಂದರು.


ಗೃಹ ಲಕ್ಷ್ಮೀ ಯೋಜನೆಯಡಿ ಮಾಸಿಕ 2,000 ರೂ., 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅನ್ನ ಭಾಗ್ಯ, ಯುವ ನಿಧಿ ಈ ಯೋಜನೆಗಳ ಜಾರಿ ಪರಿಣಾಮ ರಾಜ್ಯದ ಜಿಡಿಪಿ, ಆರ್ಥಿಕ ಚಟುವಟಿಕೆ ಜಾಸ್ತಿಯಾಗುತ್ತದೆ. ಐದು ಗ್ಯಾರಂಟಿಗಳಿAದ ಮಾಸಿಕ ಒಬ್ಬರಿಗೆ 4 ರಿಂದ 5 ಸಾವಿರ ರೂ. ದೊರೆತರೆ, ವಾರ್ಷಿಕ 48 ರಿಂದ 60 ಸಾವಿರ ರೂ. ಲಭಿಸಲಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ದಿ ವಿಚಾರದಲ್ಲಿ ನಮ್ಮ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ,ನಮ್ಮ ಸರ್ಕಾರದ ಹಿಂದಿನ ಅವಧಿಯ 5 ವರ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 99,600 ಮನೆಗಳು ಸೇರಿದಂತೆ ರಾಜ್ಯದಾದ್ಯಂತ 14,42,000 ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ ಹಿಂದಿನ ಸರ್ಕಾರ ಐದು ವರ್ಷದಲ್ಲಿ ಕೇವಲ 3 ಲಕ್ಷ ಮಾತ್ರ ಮನೆ ನಿರ್ಮಾಣ ಮಾಡಿದ್ದು, ಅದರಲ್ಲಿ ಕೇವಲ 19,000 ಮನೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಿಸಿದೆ. ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಕೇವಲ ಮರುನಾಮಕರಣ ಮಾಡಿದ್ದೇ ಹಿಂದಿನ ಸರ್ಕಾರದ ಕೊಡುಗೆ ಎಂದು ಸಿ.ಎಂ. ಸಿದ್ದರಾಮಯ್ಯ ತಿಳಿಸಿದರು.

ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ,ಬಿಜೆಪಿ ಸರ್ಕಾರ ಬಡವರಿಗೆ ಯಾವುದೇ ಯೋಜನೆ ಜಾರಿ ಮಾಡಲಿಲ್ಲ. ಯೋಜನೆಗಳ ಕುರಿತಾಗಿ ನಾವು ಪಾರ್ಲಿಮೆಂಟ್ ನಲ್ಲಿ ಮಾತನಾಡಲು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ನಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಇದೀಗ ಎಲ್ಲ ಕಡೆ ಮೋದಿ ಕರ್ನಾಟಕದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಯಿಂದ ದಿವಾಳಿ ಆಗಿ ಹೋಗುತ್ತದೆ ಅಂತ ಹೇಳುತ್ತಿದ್ದಾರೆ. ಮೋದಿ ಅವರು ಯೋಜನೆ ಲಾಭ ಜನರಿಗೆ ಸಿಗುತ್ತದೆಯೇ ಇಲವೋ ಎನ್ನುವ ಬಗ್ಗೆ ತಿಳಿದುಕೊಳ್ಳಬೇಕು. ಒಂದು ವೇಳೆ ತಿಳಿದಿದ್ದೇ ಆದಲ್ಲಿ ಅವರು ಮಾತನಾಡುವುದಿಲ್ಲ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಈ ಪ್ರದೇಶಕ್ಕೆ 371ಜೆ ತಿದ್ದುಪಡಿ ರೂಪದಲ್ಲಿ ಈಗಾಗಲೆ ತಮ್ಮ ಬದುಕಿನಲ್ಲಿ ಬೆಳಕು ತಂದಿದ್ದಾರೆ. ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೆ ತರುವ ಮೂಲಕ ಬಡವರ ಧ್ವನಿಯಾಗಿ ನಿಂತಿದ್ದೇವೆ. ಈ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 60 ಸಾವಿರ ರೂ. ಸೌಲಭ್ಯ ಸಿಗಲಿದೆ.ಬಡವರ ಹೊಟ್ಟೆಗೆ ಅನ್ನ, ಉಚಿತ ವಿದ್ಯುತ್, ಮಹಿಳೆಯರಿಗೆ ಪ್ರಯಾಣ ಉಚಿತ, ಮಹಿಳೆಯರಿಗೆ 2,000 ರೂ. ಅರ್ಥಿಕ ಸಹಾಯ, ನಿರುದ್ಯೋಗಿಗೆ ಯುವ ನಿಧಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಕೆಲವರು ಮಾತನಾಡುತ್ತಾರೆ, ಆದರೆ ದೇಶವನ್ನು ಲೂಟಿ ಹೊಡೆದು ವಿದೇಶಕ್ಕೆ ಹಾರಿದವರ ಬಗ್ಗೆ ಯಾರು ಚಕಾರ ಎತ್ತಲ್ಲ ಎಂದ ಅವರು ಜನರ ಬದುಕಿನಲ್ಲಿ ಭರವಸೆಯ ಬೆಳಕು ಚೆಲ್ಲುವ ಯೋಜನೆ ಇವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಗೃಹಜೋತಿ ಯೋಜನೆ ನೋಂದಣಿಗೆ ಅಂತಿಮ ದಿನಾಂಕ ಇಲ್ಲ ಎಂದರು. ರಾಹುಲ್ ಗಾಂಧಿ ಕರ್ನಾಟಕದಲ್ಲೂ ಜೋಡೋ ಯಾತ್ರೆ ಮಾಡಿದ್ದರು. ಭಾರತ ಜೋಡೋ ಯಾತ್ರೆ ವೇಳೆ ಸಾಮಾನ್ಯ ಜನರ ಜೊತೆ ಚರ್ಚೆ ಮಾಡಿ ಅವರ ಸಮಸ್ಯೆ ಅರಿತುಕೊಂಡಿದ್ದರು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮಧ್ಯಮ ವರ್ಗದವರು ಸಂಕಷ್ಟದಲ್ಲಿದ್ದಾರೆ. ಅವರ ಕೈ ಬಲಪಡಿಸಬೇಕು ಅಂತ ಹೇಳಿದರು. ಅವರ ಸೂಚನೆ ಮೇರೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು. ಒಂದು ಕೋಟಿ 42 ಲಕ್ಷ ಜವರು ಗೃಹಜೋತಿ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಗೃಹಜೋತಿ ನೋಂದಣಿಗೆ ಕಡೆಯ ದಿನ ಅಂತ ಇಲ್ಲ. ಉಚಿತವಾಗಿ ನೀಡೋದು ಗಿಫ್ಟ್ ಅಲ್ಲ. ಬದಲಾಗಿ ಜನರ ಆರ್ಥಿಕ ಸ್ಥಿತಿ ಸುಧಾರಿಸೋದು ಆಗಿದೆ. ಸಾಮಾನ್ಯ ಜನರಿಗೆ ಹಣ ಉಳಿದರೆ ಅವರು ಬೇರೆ ರೂಪದಲ್ಲಿ ಹಣ ಖರ್ಚು ಮಾಡ್ತಾರೆ. ಇದರಿಂದ ಸರ್ಕಾರಕ್ಕೆ ಮತ್ತೆ ತೆರಿಗೆ ಬರುತ್ತೆ. ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಕೈ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಹಾಗೆ ಈ ಬಾರಿ ಮಲ್ಲಿಕಾರ್ಜುನ ಖರ್ಗೆರನ್ನು ಕೂಡಾ ಗೆಲ್ಲಿಸಬೇಕು ಎಂದರು.

Leave a Reply

Your email address will not be published. Required fields are marked *