ಕಾರ್ಕಳ : ಶತಮಾನಗಳಿಂದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನೆಲೆಕಂಡುಕೊAಡಿರುವ ಮಲೆಕುಡಿಯರು ಸೇರಿದಂತೆ ಇತರೆ ಅರಣ್ಯ ಅವಲಂಬಿತರು ಸಣ್ಣ ರೈತರು, ಕೃಷಿ ಕಾರ್ಮಿಕರು ಕಸ್ತೂರಿರಂಗನ್ ವರದಿ ಜಾರಿಯಿಂದ ಸಂಕಷ್ಟವನ್ನು ಎದುರಿಸುವ ಭೀತಿಯಿದೆ. ಆದ್ದರಿಂದ ಕಸ್ತೂರಿ ರಂಗನ್ ವರದಿ ಯಥಾವತ್ ಅನುಷ್ಠಾನ ಎಂಬ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆಗೆ ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ತೀವೃ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೂಡ ಯಥಾವತ್ ಜಾರಿ ಪ್ರಸ್ತಾಪದ ವಿರುದ್ಧ ದೊಡ್ಡಮಟ್ಟದಲ್ಲಿ ಹೋರಾಟಗಳು ನಡೆದ ಪರಿಣಾಮವಾಗಿ ಈ ಬಗ್ಗೆ ಸರ್ಕಾರಗಳು ಮೌನವಾಗಿದ್ದವು. ಮತ್ತೆ ಪುನ: ಜನರ ಬದುಕಿನಲ್ಲಿ ಚೆಲ್ಲಾಟವಾಡುವ ಯೋಜನೆಯ ಕುರಿತಾಗಿ ಪ್ರಸ್ತಾಪಿಸುವುದು ಸರಿಯಲ್ಲ. ಯೋಜನೆ ಜಾರಿಗೆ ಮುಂದಾದರೆ ಮತ್ತೊಮ್ಮೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಜನ ಆಕ್ರೋಶ ಭರಿತರಾಗಿ ಬೀದಿಗಿಳಿದು ಹೋರಾಟ ಮಾಡುವ ಸನ್ನಿವೇಶಕ್ಕೆ ಅವಕಾಶ ಕೊಡಬಾರದು.
ಈ ಯೋಜನೆಯ ಸಮಗ್ರ ಮಾಹಿತಿಯನ್ನು ಜನರ ಮುಂದೆ ಚರ್ಚೆಗೆ ಅವಕಾಶ ಮಾಡಿ ಕೊಡಬೇಕು. ಜನರ ಬದುಕಿಗೆ ಮಾರಕವಾಗುವಂತಹ ಯಾವುದೇ ಯೋಜನೆಗಳನ್ನು ಈ ಭಾಗದಲ್ಲಿ ಜಾರಿ ಮಾಡುವುದನ್ನು ರಾಜ್ಯ ಮಲೆಕುಡಿಯ ಸಂಘ ತೀವ್ರವಾಗಿ ಪ್ರತಿಭಟಿಸುತ್ತದೆ ಎಂದು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ತಿಳಿಸಿದ್ದಾರೆ.