ಕಾರ್ಕಳ: ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಜನರನ್ನು ಸುಲಿಗೆ ಮಾಡಿ ಭ್ರಷ್ಟಾಚಾರವನ್ನೇ ಬಂಡವಾಳನ್ನಾಗಿಸಿದ ಬಿಜೆಪಿ ನಾಯಕರು ಇದೀಗ ಅಧಿಕಾರ ಕಳೆದುಕೊಂಡು ಅನಾಥ ಪ್ರಜ್ಞೆಯಲ್ಲಿದ್ದಾರೆ.ಕಾಂಗ್ರೆಸ್ ಸರ್ಕಾರದ ಅತ್ಯುತ್ತಮ ಆಡಳಿತ ನೋಡಿ ಭ್ರಮನಿರಸನರಾಗಿ ಇದೀಗ ಏನೇನೋ ಹೇಳಿಕೆ ನೀಡುತ್ತಿದ್ದು ಈ ನಾಡಿನ ಪ್ರಜ್ಞಾವಂತ ಜನ ಇದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಹೇಳಿದ್ದಾರೆ.
ಕಾಂಗ್ರೆಸ್ ಸರಕಾರದ ಜನಪರವಾದ ಗ್ಯಾರಂಟಿ ಯೋಜನೆಗಳನ್ನು ಅಪಪ್ರಚಾರದ ಮೂಲಕ ದಿಕ್ಕು ತಪ್ಪಿಸಿ ಬಡ ಫಲಾನುಭವಿಗಳ ಹೊಟ್ಟೆಗೆ ಹೊಡೆಯುವ ವ್ಯರ್ಥ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಬಿಪಿನ್ ಆರೋಪಿಸಿದ್ದಾರೆ.
ಬಿಜೆಪಿ ನಾಯಕರಿಗೆ ಈ ಯೋಜನೆಗಳಿಗೆ ಜನರ ಬೆಂಬಲದ ಮಹಾಪೂರ ಹರಿದು ಬರುತ್ತಿರುವುದನ್ನು ಕಂಡು ದಿಗ್ಭ್ರಮೆಯಾಗಿದೆ. ಈ ಹತಾಶ ಭಾವನೆಯಲ್ಲಿ ಕಾಂಗ್ರೆಸ್ ಸರಕಾರದ ಮೇಲೆ ಹತ್ತುಹಲವು ಸುಳ್ಳು ಆರೋಪ ಹೊರಿಸಿ ತೇಜೋವಧೆ ಮಾಡುತ್ತಿದ್ದು, ಕೃಷಿ ಇಲಾಖೆಯ ಸಚಿವರ ವಿರುದ್ಧ ಲಂಚದ ಸುಳ್ಳು ಆರೋಪ ಹೊರಿಸಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ತಮ್ಮದೇ ಆಡಳಿತಾವಧಿಯಲ್ಲಿ ಮಾಡಿದ ವಿದ್ಯುತ್ ಬಿಲ್ ದರ ಏರಿಕೆ, ತಿರುಪತಿಗೆ ರಾಜ್ಯದ ನಂದಿನಿ ತುಪ್ಪ ಪೂರೈಕೆ ಸ್ಥಗಿತ, ಅಷ್ಟೇ ಅಲ್ಲದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡೇ ತಿಂಗಳ ಅವದಿಯಲ್ಲಿ ಬೆಲೆ ಏರಿಕೆ, ವರ್ಗಾವಣೆ ದಂಧೆ ಮೊದಲಾದ ವಿಷಯಗಳಿಗೆ ಕಾಂಗ್ರೆಸ್ಸನ್ನು ಹೊಣೆಯಾಗಿಸಿ ಮಾಡಿದ ಪ್ರತಿಭಟನೆಯ ಹಿಂದಿದ್ದ ಅಳುವ ಕಾಂಗ್ರೆಸ್ ವಿರುದ್ಧದ ಪ್ರಜಾತಂತ್ರ ವಿರೋಧಿ ಕಾರ್ಯಸೂಚಿಯನ್ನು ಜನ ಅರ್ಥಮಾಡಿಕೊಂಡಿದ್ದಾರೆ. ಯಾವುದೇ ನಿರ್ದಿಷ್ಟತೆ ಇಲ್ಲದ ನಕಲಿ ಪತ್ರಕ್ಕಾಗಿ ಸಚಿವರ ರಾಜೀನಾಮೆ ಕೇಳುವ ಮೊದಲು ತಮ್ಮ ಬಿಜೆಪಿ ಆಡಳಿತಾವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿ ಸಿಕ್ಕಿಬಿದ್ದ, ಆತ್ಮಹತ್ಯೆಗೆ ಕಾರಣರಾದ ಎಷ್ಟು ಮಂದಿ ಸಚಿವರು ರಾಜೀನಾಮೆ ಕೊಟ್ಟಿದ್ದಾರೆಯೇ ಎನ್ನುವ ಬಗ್ಗೆ ಉತ್ತರಿಸಲಿ ಎಂದು ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.