ಕಾರ್ಕಳ : ನೈತಿಕ ಪೊಲೀಸ್ ಗಿರಿ ನಡೆಸಿದ ಐವರು ಯುವಕರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಹೆಸರಾಂತ ಕಾಲೇಜೊಂದರ ನಾಲ್ವರು ವೈದ್ಯರು ಹಾಗೂ ಅದೇ ಕಾಲೇಜಿನ ಇಬ್ಬರು ಮಹಿಳಾ ಪ್ರೊಫೆಸರ್ ಗಳು ರವಿವಾರದಂದು ಒಂದೇ ಕಾರಿನಲ್ಲಿ ಮಂಗಳೂರಿನಿಂದ ಶೃಂಗೇರಿಗೆ ತೆರಳಿ ಸಂಜೆ 4.30ರ ವೇಳೆಗೆ ಕಾರ್ಕಳದ ಕುಂಟಲ್ಪಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದರು. ಮಾಳ ಎಸ್ ಕೆ ಬಾರ್ಡರ್ ಬಳಿಯಿಂದ ಇವರ ಕಾರನ್ನು ಹಿಂಬಾಲಿಸಿ ಬಂದ ಮತ್ತೊಂದು ಕಾರು ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಒಂದೇ ಕಾರಿನಲ್ಲಿ ವಿಭಿನ್ನ ಕೋಮಿಗೆ ಸೇರಿದವರು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದನೆಗೈದು ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.
ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ನೇರವಾಗಿ ೧೧೨ಗೆ ಕರೆ ಮಾಡಿ ಘಟನೆಯ ಕುರಿತು ಮಾಹಿತಿ ನೀಡಿದ ಮೇರೆಗೆ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ್,ಟಿ.ಡಿ , ನಗರ ಠಾಣಾಧಿಕಾರಿ ಸಂದೀಪ್ ಶೆಟ್ಟಿ, ಗ್ರಾಮಾಂತರ ಠಾಣಾಧಿಕಾರಿ ದಿಲೀಪ್ ತೆರಳಿ ಸಂತೋಷ್ ನಂದಳಿಕೆ,ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ ಮಿಯ್ಯಾರು, ಸಂದೀಪ್ ಪೂಜಾರಿ ಮಿಯ್ಯಾರು, ಸುಜಿತ್ ತೆಳ್ಳಾರು ಎಂಬವರನ್ನು ಬಂಧಿಸಿದ್ದಾರೆ.
ಈ ವೇಳೆ ಸ್ಥಳದಲ್ಲಿ ಬಿಗುವಾತಾವರಣ ನಿರ್ಮಾಣವಾಗಿದ್ದು, ಕಾರ್ಕಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಜಾಮೀನು ಮೇರೆಗೆ ಬಿಡುಗಡೆಗೊಳಿಸಲಾಗಿದೆ.