ಕಾರ್ಕಳ : ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜಯಂತಿನಗರ ಎಂಬಲ್ಲಿನ ಕಳವು ಪ್ರಕರಣದ ಆರೋಪಿಗಳಿಗೆ 3 ವರ್ಷ 6 ತಿಂಗಳ ಜೈಲು ಶಿಕ್ಷೆ ಮತ್ತು ರೂ.2,000 ದಂಡ ವಿಧಿಸಿ ನ್ಯಾಯಾಲಯವು ಆದೇಶ ಹೊರಡಿಸಿದೆ.
ಕಳೆದ 2012 ಏಪ್ರಿಲ್ 27ರ ರಾತ್ರಿ ಕಾರ್ಕಳದ ಕುಕ್ಕುಂದೂರು ಗ್ರಾಮದ ಜಯಂತಿನಗರ 2ನೇ ಕ್ರಾಸ್‌ನ ನಿವಾಸಿ ರಮಾ ಆಚಾರ್ಯ ಎಂಬವರ ಮನೆಯಲ್ಲಿ ಬೆಲೆಬಾಳುವ ಚಿನ್ನಾಭರಣಗಳನ್ನು ಕಳವುಗೈಯಲಾಗಿತ್ತು.
ಆರೋಪಿಗಳಾದ ಆನಂದ ಹಾಗೂ ರತ್ನಾ ಎಂಬವರು ರಮಾ ಆಚಾರ್ಯ ಮನೆಯ ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿ, ಗೋಡೆಯಲ್ಲಿ ನೇತು ಹಾಕಿದ ಚೀಲದಲ್ಲಿಟ್ಟಿದ್ದ ಚಿನ್ನದ ಪದಕ ಹೊಂದಿದ ಮುತ್ತಿನ ಸರ-1 ಹವಳದ ಚಿನ್ನದ ಸರ-1 ಜೊತೆ ಬಿಳಿ ಹರಳು ಹೊಂದಿದ್ದ ಚಿನ್ನ ಬೆಂಡೋಲೆ-1 ಜೊತೆ, , ಪಚ್ಜೆ ಹರಳಿನ ಚಿನ್ನದ ಬೆಂಡೋಲೆ-1 ಜೊತೆ, ಪಚ್ಚೆದಾರದಲ್ಲಿ ಕಟ್ಟಿದ್ದ ಚಿನ್ನದ ಐಶ್ವರ್ಯ ಪದಕ, ಬೆಳ್ಳಿಯ ಕಾಲುಗೆಜ್ಜೆ-2 ಜೊತೆ ಹಾಗೂ ರೂ.2,700 ನಗದು ಮತ್ತು ಜಾಗದ ದಾಖಲಾತಿ ಸಹಿತ ಅಂದಾಜು ಒಟ್ಟು ರೂ.90,000. ಮೌಲ್ಯದ ಸ್ವತ್ತುಗಳನ್ನು ಕಳವುಗೈದಿದ್ದರು.
ಕಾರ್ಕಳ ನಗರ ಠಾಣೆಯ ಪೋಲೀಸ್ ಉಪನಿರೀಕ್ಷಕರಾಗಿದ್ದ ಜಿ.ಎಂ. ನಾಯ್ಕರ್ ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಇವರು ಆರೋಪಿ ಆನಂದ ಗೆ 3 ವರ್ಷ 6 ತಿಂಗಳ ಸದಾ ಸಜೆ ಮತ್ತು ರೂ.2,000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ, 2) ಕಲಂ.380 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 2 ವರ್ಷಗಳ ಸದಾ ಸಜೆ ಮತ್ತು ರೂ.2,000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ ಮತ್ತು 2ನೇ ಆರೋಪಿ ರತ್ನಾ ಗೆ 6 ತಿಂಗಳ ಸದಾ ಸಜೆ ಮತ್ತು ರೂ.5,000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೆ ರಮಾ ಆಚಾರ್ಯ ಅವರಿಗೆ ರೂ.4,000 ನಗದು ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ರಾಜಶೇಖರ ಪಿ ಶಾಮರಾವ್ ಇವರು ವಾದಿಸಿದ್ದರು.