ಕಾರ್ಕಳ: ಕಾರ್ಕಳ ಬಸ್ಸು ನಿಲ್ದಾಣ ಸಮೀಪದ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಬಳಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ವಿದ್ಯುತ್ ಪರಿಕರಗಳು, ಸಣ್ಣಪುಟ್ಟ ದಾಖಲೆಗಳು ಸೇರಿ ಕೆಲವು ಸೊತ್ತುಗಳು ಅಗ್ನಿಗಾಹುತಿಯಾಗಿವೆ.
ಗುರುವಾರ ಮುಂಜಾನೆ ಸುಮಾರು 9 ಗಂಟೆಗೆ ಏಕಾಏಕಿ ಬ್ಯಾಂಕಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ಬಳಿಕ ಬೆಂಕಿ ವ್ಯಾಪಿಸಲು ಆರಂಭವಾಗಿದೆ. ಈ ಘಟನೆಯಿಂದ ಎಚ್ಚೆತ್ತ ಬ್ಯಾಂಕ್ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಂಕ್ ಸಿಬ್ಬಂದಿಗಳ ಸಮಯಪ್ರಜ್ಞೆ ಯಿಂದ ಭಾರೀ ದುರಂತ ತಪ್ಪಿದ್ದು ಘಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಈ ಅಗ್ನಿ ಅವಘಡದಿಂದ ಯಾವುದೇ ಅಗತ್ಯ ದಾಖಲೆಗಳು ಹಾಗೂ ಸೊತ್ತುಗಳು ಹಾನಿಯಾಗಿಲ್ಲ ಗ್ರಾಹಕರು ಭಯ ಪಡುವ ಅವಶ್ಯಕತೆ ಇಲ್ಲ ಬ್ಯಾಂಕ್ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ