ಕಾರ್ಕಳ:ಸಾರ್ವಜನಿಕರ ತೀವೃ ಹೋರಾಟ ಫಲವಾಗಿ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ 1 ರಲ್ಲಿ ಟೋಲ್ ಸ್ಥಾಪನೆಗೆ ಬ್ರೇಕ್ ಬಿದ್ದ ಬೆನ್ನಲ್ಲೇ ಇದೀಗ ಮತ್ತೆ ಬೆಳ್ಮಣ್ ಸಮೀಪದ ಕಂಚಿನಡ್ಕದಲ್ಲಿ ಟೋಲ್ ಸ್ಥಾಪಿಸಿ ವಾಹನ ಸವಾರರ ಕಿಸೆಗೆ ಕತ್ತರಿ ಹಾಕಲು ಮತ್ತೆ ಸರ್ಕಾರ ಮುಂದಾಗಿದೆ. ರಾಜ್ಯ ಹೆದ್ದಾರಿ 1ರ ಬೆಳ್ಮಣ್ ಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿದ ಟೋಲ್ ಗೇಟ್ ಸ್ಥಾಪನೆಗೆ ಭಾರೀ ವಿರೋಧಗಳು ವ್ಯಕ್ತವಾಗಿ ಬಳಿಕ ನಿರಂತರ ಹೋರಾಟ ಪರಿಣಾಮ ಹಿಂದೆ ಸರಿದಿದ್ದ ಟೋಲ್ ಗೇಟ್ ವಿಚಾರ ಇದೀಗ ಮತ್ತೆ ಸದ್ದು ಮಾಡುತ್ತಿದ್ದು ವಾಹನ ಸವಾರರಿಗೆ ಸುಂಕದ ಬರೆ ಬೀಳುವ ಆತಂಕ ಸೃಷ್ಟಿಯಾಗಿದೆ.
ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್) ಈಗಾಗಲೇ ಪಡುಬಿದ್ರೆ ಕಾರ್ಕಳದ ರಾಜ್ಯ ಹೆದ್ದಾರಿ 1ರ ಪಡುಬಿದ್ರೆ ಬಳಿಯ ಕಂಚಿನಡ್ಕ ಪರಿಸರದಲ್ಲಿ ಟೋಲ್ ನಿರ್ಮಾಣಕ್ಕೆ ಇದೀಗ ಮೂರನೇ ಬಾರಿ ಟೆಂಡರನ್ನು ಆಹ್ವಾನಿಸಿದೆ. ಟೋಲ್ ವಿರೋಧಿ ಹೋರಾಟಗಳ ಬಳಿಕವೂ ಇದೀಗ ಮತ್ತೆ ಸರ್ಕಾರ ತನ್ನ ಬೊಕ್ಕಸ ತುಂಬಿಸಲು ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ಸುಂಕ ವಸೂಲು ಮಾಡಲು ಮುಂದಾಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ 2014ಲ್ಲಿ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಡಿ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ 1ನ್ನು ವಿಸ್ತರಿಸಿ ಚತುಷ್ಪಥ ಹೆದ್ದಾರಿಯನ್ನಾಗಿಸಿ ಮೇಲ್ದರ್ಜೆಗೇರಿಸಲಾಗಿತ್ತು. ಇದಾದ ಬಳಿಕ ಈ ಹೆದ್ದಾರಿಯಲ್ಲಿ ಟೋಲ್ ನಿರ್ಮಿಸಿ ಸುಂಕ ವಸೂಲಾತಿಗೆ ಸರ್ಕಾರ ಮನಸ್ಸು ಮಾಡಿತ್ತು. ಬೆಳ್ಮಣ್‌ನಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಸರ್ವೆ ಕಾರ್ಯವನ್ನು ಆರಂಭಿಸಿದಾಗ ಬೆಳ್ಮಣ್ ಭಾಗದ ಸಮಾನ ಮನಸ್ಕರು ಜೊತೆಯಾಗಿ ರಾಜಕೀಯ ರಹಿತ ಹೋರಾಟವನ್ನು ಮಾಡಿದ ಪರಿಣಾಮ ಕೊಂಚ ದೂರ ಸರಿದಿದ್ದ ಟೋಲ್‌ಗೇಟ್ ವಿಚಾರ ಇದೀಗ ಮತ್ತೆ ಸದ್ದು ಮಾಡುತ್ತಿದ್ದು ಈ ಭಾಗದ ವಾಹನ ಸವಾರರು ಆತಂಕಗೊAಡಿದ್ದಾರೆ.
ಮತ್ತೆ ಟೆಂಡರ್ ಪ್ರಕ್ರಿಯೆ :
ಕೆಆರ್‌ಡಿಸಿಎಲ್ ಟೆಂಡರ್ ಆಹ್ವಾನಿಸಿರುವ ಬಗ್ಗೆ ಪ್ರಕಟನೆಯನ್ನು ಹೊರಡಿಸಿದ್ದು ಅದರನ್ವಯ ಪಡುಬಿದ್ರೆ ಬಳಿಯ ಕಂಚಿನಡ್ಕದಲ್ಲಿ ರಾಜ್ಯ ಹೆದ್ದಾರಿ 1 ರಲ್ಲಿ 27.38 ಕಿ.ಮೀ. ಉದ್ದದ ರಸ್ತೆಗೆ ಟೋಲ್ ಬರೆ ಬೀಳಲಿದೆ. ಸ್ವಾರಸ್ಯವೆಂದರೆ 49.03 ಕಿ.ಮೀ ದೂರದ ಘಟ್ಟದ ಮೇಲಿನ ರಾಜ್ಯ ಹೆದ್ದಾರಿಯಲ್ಲಿ ವಾರ್ಷಿಕ 102.08 ಲಕ್ಷ ರೂ. ಸಂಗ್ರಹಿಸುವ ಗುರಿ ಇದ್ದರೆ ಕರಾವಳಿಯ ರಾಜ್ಯ ಹೆದಾರಿಯಲ್ಲಿ ಕೇವಲ 27.38 ಕಿ.ಮೀಗೆ 278.32 ಲಕ್ಷ ರೂ. ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಪದೇ ಪದೇ ಸರ್ವೆ
ಬೆಳ್ಮಣ್‌ನಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಸರ್ವೇ ನಡೆಸಲು ಸಾಕಷ್ಟು ಬಾರಿ ಪ್ರಯತ್ನಿಸಿ ವಿಫಲವಾಗಿದ್ದಟೆಂಡರ್ ಪಡೆದಿದ್ದ ಸಂಸ್ಥೆಗಳು ಬೆಳ್ಮಣ್ ಭಾಗವನ್ನು ಬಿಟ್ಟು ಬಳಿಕ ಪಡುಬಿದ್ರೆ ಸಮೀಪದ ಕಂಚಿನಡ್ಕದಲ್ಲಿ ರಸ್ತೆ ಬದಿಯಲ್ಲಿ ಸದ್ದಿಲ್ಲದೇ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ನಡೆಸುವ ವಾಹನಗಳ ಲೆಕ್ಕಾಚಾರವನ್ನು ಮಾಡಲು ಮುಂದಾಗಿತ್ತು ಬಳಿಕ ಅಲ್ಲಿಯೂ ವಿಫಲಗೊಂಡು ಸರ್ವೇ ಕಾರ್ಯ ನಿಲ್ಲಿಸಿ ಟೋಲ್ ಗೇಟ್ ವಿಚಾರ ಸ್ವಲ್ಪ ದೂರ ಸರಿದಿತ್ತು. ಇದೀಗ ಮತ್ತೆ ಟೋಲ್ ಗೇಟ್ ನಿರ್ಮಾಣದ ಕುರಿತು ಟೆಂಡರ್ ಕರೆಯಲಾಗಿದ್ದು ಮತ್ತೆ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಗೇಟ್ ಸ್ಥಾಪನೆಗೆ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಮೊದಲು ಟೋಲ್ ಸಂಗ್ರಹದ ಗುತ್ತಿಗೆ ಪಡೆದುಕೊಂಡ ಮೈಸೂರಿನ ಮಿತ್ರಾ ಇನ್ಪೋ ಸೊಲ್ಯೂಷನ್ ಸಂಸ್ಥೆ ಸಾರ್ವಜನಿಕರ ತೀವೃ ವಿರೋಧದ ಹಿನ್ನಲೆಯಲ್ಲಿ ಪ್ರಾಯಶಃ ಹಿಂದೆ ಸರಿದಿದ್ದು ಆ ಬಳಿಕ ಮತ್ತೊಂದು ಖಾಸಗಿ ಸಂಸ್ಥೆ ಕುಂದಾಪುರ ಮೂಲದ ಏಜೆನ್ಸಿ ಸರ್ವೇ ಕಾರ್ಯವನ್ನು ನಡೆಸಿತ್ತು. ಮತ್ತೆ ಹೋಟೆಲ್‌ವೊಂದಲ್ಲಿ ಕುಳಿತು ಸರ್ವೆ ಕಾರ್ಯವನ್ನು ಇನ್ನೊಂದು ಸಂಸ್ಥೆ ನಡೆಸಿತ್ತು. ಅಲ್ಲದೇ ಇನ್ನೊಂದು ಸಂಸ್ಥೆ ಗುಟ್ಟಾಗಿ ಬೆಳ್ಮಣ್ ಭಾಗವನ್ನು ಬಿಟ್ಟು ಪಡುಬಿದ್ರೆ ಸಮೀಪದ ಕಂಚಿನಡ್ಕನಲ್ಲಿ ಕುಳಿತು ಸರ್ವೇ ಕಾರ್ಯವನ್ನು ಮಾಡಲು ಮುಂದಾಗಿದ್ದರೂ ಅಲ್ಲೂ ಜನ ವಿರೋಧವನ್ನು ವ್ಯಕ್ತಪಡಿಸಿ ಸರ್ವೇ ಕಾರ್ಯಕ್ಕೆ ಅಡ್ದಿಪಡಿಸಿದ್ದರು. ಇದೀಗ ಇಷ್ಟೆಲ್ಲಾ ವಿರೋಧಗಳ ನಡುವೆ ಮತ್ತೆ ಟೋಲ್ ಗೇಟ್ ನಿರ್ಮಿಸಿ ಸುಂಕವನ್ನು ಪಡೆಯುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು ಇದಕ್ಕೆ ಅವಕಾಶ ನೀಡುವುದಿಲ್ಲವೆಂದು ಸಾರ್ವಜನಿಕರು ಖಡಕ್ ಎಚ್ಚರಿಕೆ ನೀಡಿದ್ದಾರೆ
ಕಾರ್ಕಳ ಪಡುಬಿದ್ರೆ ಹೆದ್ದಾರಿಯಲ್ಲಿ ಯಾವುದೇ ಕಾರಣಕ್ಕೂ ಟೋಲ್ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಪ್ರತೀ ಭಾರಿಯೂ ವಿರೋಧವನ್ನು ವ್ಯಕ್ತಪಡಿಸಿದ್ದರೂ ಮತ್ತೆ ಮತ್ತೆ ಸರ್ಕಾರ ಟೋಲ್ ನಿರ್ಮಾಣಕ್ಕೆ ಮುಂದಾಗುತ್ತಿದೆ. ಯಾವುದೇ ಕಾರಣಕ್ಕೂ ಟೋಲ್ ನಿರ್ಮಾಣಕ್ಕೆ ಅವಕಾಶವನ್ನು ನೀಡುವುದಿಲ್ಲ. ಜನಸಾಮಾನ್ಯರು,ವಾಹನ ಸವಾರರು ರಾಜಕೀಯ ರಹಿತ ಹೋರಾಟಕ್ಕೆ ಮತ್ತೆ ಸಜ್ಜಾಗಬೇಕಾಗಿದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎನ್ .ಸುಹಾಸ್ ಹೆಗ್ಡೆ ನಂದಳಿಕೆ ಕರೆ ನೀಡಿದ್ದಾರೆ.