ಕಾರ್ಕಳ: ಖಾಸಗಿ ಸಹಕಾರಿ ಸಂಸ್ಥೆಯೊಂದರಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಶವ ಮಾಪಾಲು ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ನಿವಾಸಿ ಸಂತೋಷ್ ಯಾನೆ ಹರಿತನಯ ದೇವಾಡಿಗ ಆತ್ಮಹತ್ಯೆ ಮಾಡಿಕೊಂಡ ಯುವಕ.
ಸಂತೋಷ್ ಯಾನೆ ಹರಿತನಯ ದೇವಾಡಿಗ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದರು. ಗುರುವಾರ ಬೆಳಗ್ಗೆ ಸಂತೋಷ್ ದೇವಾಡಿಗನ ಶವ ಮಾಪಾಲು ಎಂಬಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಈತ ಕಳೆದ ಶನಿವಾರ ಮೀನು ಹಿಡಿಯಲೆಂದು ತನ್ನ ಸಂಬಂಧಿಕರ ಮನೆಯಿಂದ ಸೀರೆ ಪಡೆದುಕೊಂಡ ಬಳಿಕ ಮನೆಗೆ ಬಾರದೇ ನಾಪತ್ತೆಯಾಗಿದ್ದ.
ಕಾರ್ಕಳದ ಮಾರ್ಕೆಟ್ ಬಳಿಯ ಕಚೇರಿಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಮೀಳಾ ದೇವಾಡಿಗ ಆತ್ಮಹತ್ಯೆಗೆ ಸಂತೋಷ್ ಯಾನೆ ಹರಿತನಯ ದೇವಾಡಿಗನ ಕಿರುಕುಳವೇ ಕಾರಣವೆಂದು ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದರು
ಪ್ರಮೀಳಾ ದೇವಾಡಿಗ ಜೊತೆ ಸ್ನೇಹ ಹೊಂದಿದ್ದ ಸಂತೋಷ್ ದೇವಾಡಿಗ ಆಕೆಯಿಂದ 3 ಲಕ್ಷ ಸಾಲ ಪಡೆದು ಬಳಿಕ ಹೆಚ್ಚುವರಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಇದರಿಂದ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಇದೀಗ ಪ್ರಮೀಳಾ ದೇವಾಡಿಗ ಆತ್ಮಹತ್ಯೆಯ ಆರೋಪಿ ಎನ್ನಲಾದ ಸಂತೋಷ ಯಾನೆ ಹರಿತನಯ ದೇವಾಡಿಗ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.