ಮೂಡುಬಿದ್ರೆ: ಕಾರ್ಕಳ ಹಾಗೂ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಹಲವೆಡೆ ಸೋಮವಾರ ತಡರಾತ್ರಿ ಕಳ್ಳರು ಗೂಡಂಗಡಿಗಳಿಗೆ ಕನ್ನ ಹಾಕಿದ್ದು ಚಿಲ್ಲರೆ ನಗದು ಹಾಗೂ ಸಣ್ಣಪುಟ್ಟ ವಸ್ತುಗಳನ್ನು ಕಳುವುಗೈದು ಪರಾರಿಯಾಗಿದ್ದಾರೆ.
ಮೂಡುಬಿದಿರೆಯ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ದ್ವಾರದ ಬಳಿಯ ಗೂಡಂಗಡಿ,ಅಲAಗಾರು ಗುಡ್ಡೆ ಎಂಬಲ್ಲಿನ ಗೂಡಂಗಡಿಯಲ್ಲಿ, ಪಾಲಡ್ಕದ ಒಂದು ಗೂಡಂಗಡಿಯಲ್ಲೂ ಕಳ್ಳತನಕ್ಕೆ ವಿಫಲ ಯತ್ನ ನಡೆದಿದ್ದು, ಬಿರಿಯಾನಿ ಡಾಬಾಕ್ಕೆ ನುಗ್ಗಿದ ಕದೀಮರು ಕಾಣಿಕೆ ಡಬ್ಬ ದೋಚಿದ್ದಾರೆ ಅಲ್ಲದೇ ಸಚ್ಚರಿಪೇಟೆಯ ಒಂದು ಗೂಡಂಗಡಿಯ ಬಾಗಿಲು ಮುರಿದ ಕಳ್ಳರು ಚಿಲ್ಲರೆ ಹಣ ದೋಚಿ ಪರಾರಿಯಾಗಿದ್ದಾರೆ.
ಸಾಮಾನ್ಯವಾಗಿ ಗೂಡಂಗಡಿಗಳನ್ನು ಟಾರ್ಗೆಟ್ ಮಾಡದ ಕಳ್ಳರು ಈ ಬಾರಿ ಮಾತ್ರ ದೊಡ್ಡ ಅಂಗಡಿಗಳನ್ನು ಬಿಟ್ಟು ಸಣ್ಣಸಣ್ಣ ಗೂಡಂಗಡಿಗಳನ್ನೇ ಗುರಿಯಾಗಿಸಿದ್ದು ಇದು ಚಿಲ್ಲರೆ ಕಾಸಿಗಾಗಿ ಚಿಲ್ಲರೆ ಕಳ್ಳರ ಕೃತ್ಯ ಆಗಿಒರಬಹುದೆಂದು ಶಂಕಿಸಲಾಗಿದೆ. ಇಷ್ಟೆಲ್ಲಾ ಸರಣಿ ಕಳ್ಳತನವಾದರೂ ಕೆಲವು ವರ್ತಕರು ದೂರನ್ನೇ ದಾಖಲಿಸಿಲ್ಲ.
ಮಳೆಗಾಲವಾಗಿರುವ ಹಿನ್ನಲೆಯಲ್ಲಿ ರಾತ್ರಿವೇಳೆ ಜನರ ಓಡಾಟ ಕಡಿಮೆಯಾದ ಬಳಿಕ ಕಳ್ಳರು ಇಂತಹ ಕಳ್ಳತನ ಕೃತ್ಯಕ್ಕೆ ಮುಂದಾಗುತ್ತಿದ್ದು, ಪೊಲೀಸರು ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ಗಸ್ತು ಹೆಚ್ಚಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ