ಶಿವಮೊಗ್ಗ: ಕಾಂಗ್ರೆಸ್ ಬಂದ ಬಳಿಕ ಕೃಷಿ ಸಮ್ಮಾನ್ ಯೋಜನೆ ನಿಲ್ಲಿಸಿ ಕೃಷಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ರೈತರ ಶಾಪಕ್ಕೆ ಇಷ್ಟು ಬೇಗ ಗುರಿಯಾಗಬಾರದು. ಸರಿಪಡಿಸದಿದ್ದರೆ ಬಹಳ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಎಸ್‌ಸಿ, ಎಸ್‌ಟಿಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಸುತ್ತಿದ್ದಾರೆ. ಈ ಹಿಂದೆಯೂ ವರ್ಗಾವಣೆಯಲ್ಲಿ ಕೆಲ ನ್ಯೂನ್ಯತೆ ಸರಿಪಡಿಸುತ್ತಿದ್ದೇವು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ದೊಡ್ಡ ಮಟ್ಟದಲ್ಲಿ ವರ್ಗಾವಣೆ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ. ಲಂಚಕೋರತನದ ಬಗ್ಗೆ ಇಡೀ ರಾಜ್ಯದ ಜನ ಶಾಪ ಹಾಕುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಯಾವುದೇ ಕಾರಣಕ್ಕೂ ಜಾರಿಯಾಗಬಾರದು ಎಂದರು.
ಎಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಖರ್ಗೆ ಅವರ ಹೆಸರನ್ನೇ ಹೇಳಿಲ್ಲ. ನನ್ನ ವಿರುದ್ಧ ಕಾಂಗ್ರೆಸ್‌ನವರು ಸುಳ್ಳು ದೂರು ದಾಖಲಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ದಲಿತರ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.