ಬೆಂಗಳೂರು : ಹಾಲಿನ ದರ ಹೆಚ್ಚಳ, ಹೊರ ರಾಜ್ಯಗಳಲ್ಲಿ ನಂದಿನಿ ಹಾಲಿನ ಬೇಡಿಕೆ ಮತ್ತು ಹಾಲು ಉತ್ಪಾದಕ ರೈತರ ಸಮಸ್ಯೆಗಳೂ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಎಂಎಫ್ ಹಾಗೂ ಹಾಲು ಒಕ್ಕೂಟಗಳ ಪದಾಧಿಕಾರಿಗಳೊಂದಿಗೆ ಇಂದು (ಶುಕ್ರವಾರ) ಚರ್ಚೆ ನಡೆಸಲಿದ್ದಾರೆ.
ಇಂದು ಸಂಜೆ 6 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ನೇತೃತ್ವದಲ್ಲಿ ಹಾಲು ಒಕ್ಕೂಟಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಸಭೆಯ ನಂತರ ಹಾಲಿನ ದರ ಪ್ರತಿ ಲೀಟರ್‌ಗೆ 5 ರು. ಹೆಚ್ಚಳದ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಕೆಎಂಎಫ್ ಮೂಲಗಳು ಮಾಹಿತಿ ನೀಡಿವೆ.
ಈ ಹಿಂದೆ ಜುಲೈ 14ರಂತೆ ಕೆಎಂಎಫ್ ಹಾಗೂ ಹಾಲು ಒಕ್ಕೂಟಗಳ ಪದಾಧಿಕಾರಿಗಳೊಂದಿಗೆ ಸಭೆ ನಿಗದಿಯಾಗಿತ್ತು. ಆದರೆ, ಮುಖ್ಯಮಂತ್ರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದರು.
ಪಶು ಆಹಾರ, ಮೇವು, ವಿದ್ಯುತ್, ಸಾಗಣಿಕೆ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಿಂದ ಹೈನೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಖಾಸಗಿ ಸಂಸ್ಥೆಗಳು ರೈತರಿಗೆ ಹೆಚ್ಚಿನ ದರ ಕೊಟ್ಟು ಹಾಲು ಖರೀದಿಸುತ್ತಿವೆ. ಹಾಗಾಗಿ ರೈತರು ಖಾಸಗಿ ಸಂಸ್ಥೆಗಳಿಗೆ ಹಾಲು ಹಾಕುತ್ತಿದ್ದಾರೆ. ಇದರಿಂದ ರಾಜ್ಯದ ಹಾಲು ಒಕ್ಕೂಟಗಳಿಗೆ ಬೇಡಿಕೆಗೆ ತಕ್ಕಂತೆ ಹಾಲು ಸಂಗ್ರಹಣೆ ಆಗುತ್ತಿಲ್ಲ. ಈ ನಡುವೆ ಹೊರ ರಾಜ್ಯಗಳಲ್ಲಿ ನಂದಿನಿ ಹಾಲು ಮತ್ತು ತುಪ್ಪಕ್ಕೆ ಬೇಡಿಕೆಯೂ ಜಾಸ್ತಿಯಾಗಿದೆ. ರಾಜ್ಯ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಿ, ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರು.ಹೆಚ್ಚಿಸಬೇಕು ಎಂಬುದು ಹಾಲು ಒಕ್ಕೂಟಗಳ ಪ್ರಮುಖ ಬೇಡಿಕೆಯಾಗಿದ್ದು, ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.