Share this news

ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮ ಪಂಚಾಯಿತಿ ಕಳೆದ 2019-20 ರ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಆದರೆ ಪ್ರಶಸ್ತಿ ಘೋಷಣೆಯಾಗಿ ಮೂರು ವರ್ಷ ಕಳೆದರೂ ಸರಕಾರ ಈವರೆಗೂ ಪ್ರಶಸ್ತಿಯನ್ನು ನೀಡಿಲ್ಲ.

ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಎಲ್ಲಾ ಮಾನದಂಡಗಳನ್ನು ಪೂರೈಸಿ ಗ್ರಾಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ದುರ್ಗಾ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಮಾತ್ರ ಮರೀಚಿಕೆಯಾಗಿದೆ. ಕಳೆದ 2023ರ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಪ್ರಶಸ್ತಿ ನೀಡುವುದಾಗಿ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ಅವರನ್ನು ಕರೆಯಿಸಿ ಬಳಿಕ ಪ್ರಶಸ್ತಿಯನ್ನೇ ನೀಡದೆ ಬರಿಗೈಯಲ್ಲಿ ವಾಪಸ್ ಕಳಿಸಲಾಗಿತ್ತು.


ಈ ಕುರಿತು ಪಂಚಾಯತ್ ಅಧ್ಯಕ್ಷರು ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಕಾರ್ಕಳ ತಾಲೂಕು ಪಂಚಾಯಿತಿ ಇಓ ಅವರನ್ನು ಕೇಳಿದರೆ ಅವರಿಂದ ಸ್ಪಷ್ಟ ಉತ್ತರ ಸಿಕ್ಕಿಲ್ಲ, ಪ್ರಶಸ್ತಿ ನೀಡುವುದಾಗಿ ಬೆಂಗಳೂರಿಗೆ ಆಹ್ವಾನಿಸಿ ನಮಗೆ ಪ್ರಶಸ್ತಿ ಕೊಡದೇ ಕಳಿಹಿಸಿ ಅವಮಾನಿಸಲಾಗಿದೆ ಮಾತ್ರವಲ್ಲದೇ ಇದರಿಂದ ನಮ್ಮ ಸಾಧನೆಗೆ ಮಾಡಿರುವ ಅಗೌರವವಾಗಿದೆ ಎಂದು ದುರ್ಗ ಪಂಚಾಯಿತಿ ಅಧ್ಯಕ್ಷ ಸತೀಶ್ ನಾಯಕ್ ಆರೋಪಿಸಿದ್ದಾರೆ.ಆದರೆ ಬಳಿಕ ಕಾರ್ಕಳ ತಾಲೂಕಿನ ಇತರೇ ಪಂಚಾಯಿತಿಗಳಿಗೆ ಘೋಷಣೆಯಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ ಸರ್ಕಾರದ ತಾರತಮ್ಯ ಧೋರಣೆ ತೋರಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪ್ರಶಸ್ತಿ ಘೋಷಣೆಯಾದ ವರ್ಷದಲ್ಲಿ ಕೋವಿಡ್ ಕಾರಣದಿಂದಾಗಿ ಈ ಹಿಂದೆ ಪ್ರಶಸ್ತಿಯ ಜತೆಗೆ ನೀಡಲಾಗುತ್ತಿದ್ದ 5 ಲಕ್ಷ ನಗದು ಪುರಸ್ಕಾರವನ್ನು ತಡೆಹಿಡಿಯಲಾಗಿತ್ತು. ನಗದು ಪುರಸ್ಕಾರದಿಂದ ವಂಚಿತವಾದರೂ ಪ್ರಶಸ್ತಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ದುರ್ಗಾ ಪಂಚಾಯತ್ ಆಡಳಿತಕ್ಕೆ ಸರ್ಕಾರದ ದ್ವಂದ್ವ ನಿಲುವಿನಿಂದ ತೀವ್ರ ನಿರಾಶೆಯಾಗಿದೆ

ಪ್ರಶಸ್ತಿ ತಲುಪಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು- ಕಾರ್ಕಳ ತಾಪಂ ಇಒ

ಕಳೆದ 2019-20 ನೇ ಸಾಲಿನಲ್ಲಿ ದುರ್ಗಾ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಘೋಷಣೆಯಾಗಿತ್ತು ಆದರೆ ಕೋವಿಡ್‌ನಿಂದಾಗಿ ಆರ್ಥಿಕತೆ ಕುಸಿತದ ಹಿನ್ನೆಲೆಯಲ್ಲಿ ಐದು ಲಕ್ಷ ನಗದು ಪರಿಹಾರವನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಈ ಪ್ರಶಸ್ತಿಯನ್ನು ನೀಡುವ ವಿಚಾರದಲ್ಲಿ ಸ್ವಲ್ಪಮಟ್ಟಿನ ಗೊಂದಲವಾಗಿತ್ತು. ಗಾಂಧಿ ಗ್ರಾಮ ಪುರಸ್ಕಾರ ಪಟ್ಟಿಯಲ್ಲಿ ದುರ್ಗಾ ಗ್ರಾಮ ಪಂಚಾಯತ್ ಹೆಸರು ಘೋಷಣೆಯಾಗಿದ್ದರೂ ಪ್ರಶಸ್ತಿ ವಿತರಣೆಯ ಸಂದರ್ಭದಲ್ಲಿ ಪಟ್ಟಿಯಿಂದ ಹೆಸರು ಕೈಬಿಟ್ಟ ಪರಿಣಾಮ ಈ ಗೊಂದಲಕ್ಕೆ ಕಾರಣವಾಗಿದೆ. ಈಗಾಗಲೇ ಈ ವಿಚಾರವಾಗಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಚರ್ಚೆ ನಡೆಸಲಾಗಿದ್ದು ಪ್ರಶಸ್ತಿ ವಿತರಿಸುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ಮಾಡಲಾಗುವುದೆಂದು ಕಾರ್ಕಳ ತಾಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ ಎನ್ ಹೇಳಿದ್ದಾರೆ.

Leave a Reply

Your email address will not be published. Required fields are marked *