Share this news

ಜಯಪುರ : ವಾಸ್ತು, ಸಂಸ್ಕೃತಿ, ಇತಿಹಾಸದಲ್ಲಿ ದೇಶಕ್ಕೆ ಜೈನ ಸಮುದಾಯ ವಿಶೇಷ ಕೊಡುಗೆ ನೀಡಿದೆ. ಅಹಿಂಸಾ ಸಿದ್ದಾಂತ, ಶಾಂತಿ ಸಂದೇಶ ಜೈನ ಸಮುದಾಯದ ಮುಖ್ಯ ಧ್ಯೇಯೋದ್ದೇಶವಾಗಿದೆ. ಇಂತಹ ಒಳ್ಳೆ ಸಿದ್ದಾಂತ ಇಟ್ಟುಕೊಂಡವರ ಮೇಲೆ ದಾಳಿ ನಡೆಸುವುದನ್ನು ಜೈನ ಸಮುದಾಯ ತೀವೃವಾಗಿ ಖಂಡಿಸುತ್ತದೆ ಎಂದು ಶೃಂಗೇರಿ ಕ್ಷೇತ್ರದ ಜೈನ ಮಿಲನ ಮಾಜಿ ಅಧ್ಯಕ್ಷ ಶಾಂತಕುಮಾರ್ ಜೈನ್ ಹೇಳಿದರು.


ಅವರು ಜೈನ ಸಮಾಜ ಮೇಗುಂದಾ ಕೊಗ್ರೆ ಇವರ ವತಿಯಿಂದ ಹಿರೇಕೋಡಿ ನಂದಿ ಪರ್ವತ ಆಶ್ರಮದ ಪರಮಪೂಜ್ಯ ಆಚಾರ್ಯ 108 ಕಾಮಕುಮಾರ ನಂದಿ ಮುನಿಮಹಾರಾಜರ ಹತ್ಯೆಯನ್ನು ಖಂಡಿಸಿ ಹಾಗೂ ಸಮಗ್ರ ತನಿಖೆಗಾಗಿ ಜಯಪುರದಲ್ಲಿ ಬುಧವಾರ ನಡೆದ ಮೌನ ಪ್ರತಿಭಟನೆ, ಮೆರವಣಿಗೆ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಇಂತಹ ದಾಳಿಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಜೈನ ಮುನಿಗಳಿಗೆ ರಕ್ಷಣೆ ನೀಡಬೇಕು, ಮೇಗುಂದಾ ಹಾಗೂ ಜಯಪುರದಲ್ಲಿ ಜೈನ ಬಸದಿ ಇದ್ದು ಇಲ್ಲಿಗೂ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಮೇಗುಂದಾ ಜೈನ ಟ್ರಸ್ಟಿನ ಸದಸ್ಯ ಸುಭಾಷ್ ಚಂದ್ರ ಮಾತನಾಡಿ, ಜೈನರು ಅಹಿಂಸೆಯನ್ನು ಪ್ರತಿಪಾದಿಸುತ್ತಿದ್ದಾರೆ. ಜೈನರ ಧರ್ಮ ಸಿದ್ಧಾಂತದ ಮೇಲೆ ದಾಳಿ ನಡೆಯುತ್ತಿದೆ, ತ್ಯಾಗಿಗಳ ಮೇಲೆ ಹಲ್ಲೆಯಾಗುತ್ತಿದೆ, ಜೈನ ಮುನಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಕಳಸ ತೀರ್ಥಕ್ಷೇತ್ರ ಸಮಿತಿಯ ಸದಸ್ಯ ಶ್ರೇಣಿಕ್ ಜೈನ್, ಸಮುದಾಯ ತೀರ್ಥ ಸಮಿತಿ ಅಧ್ಯಕ್ಷ ಬ್ರಹ್ಮದೇವ, ಸದಸ್ಯ ಹರ್ಷೇಂದ್ರ, ಸಮ್ಮಿಕ್ ಕುಮಾರ್ ಸಂಸೆ, ವರ್ಧಮಾನ ಕಡೆಮನೆ, ಮೇಗುಂದಾ ಜೈನ ಟ್ರಸ್ಟ್ ಅಧ್ಯಕ್ಷ ಭರತ್ ರಾಜ್,  ಜೈನ ಮಿಲನ ಸದಸ್ಯ ಶಾಂತಕುಮಾರ್ ಜೈನ್, ಪತ್ರಕರ್ತರಾದ ಉದಯಕುಮಾರ್ ಜೈನ್, ಜಿನೇಶ್ ಇರವತ್ತೂರು ಸತೀಶ್ ಜೈನ್ ಉಪಸ್ಥಿತರಿದ್ದರು.

ಜಯಪುರ ಠಾಣಾಧಿಕಾರಿ ನಾರಾಯಣಶೆಟ್ಟಿ, ನಾಡಕಚೇರಿ ರವಿನ್ಯು ಇನ್ಸ್ಪೆಕ್ಟರ್ ಸುಧೀರ್ ಹಾಗೂ ಚುನಾಯಿತ ಪ್ರತಿನಿಧಿಗಳ ಮೂಲಕ ಶೃಂಗೇರಿ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.

Leave a Reply

Your email address will not be published. Required fields are marked *