Share this news

ಬೆಂಗಳೂರು :ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉಪಯೋಜನೆಯಡಿ ಮೀಸಲಿರಿಸಿದ ಅನುದಾನದಲ್ಲಿ 11 ಸಾವಿರ ಕೋಟಿ ರೂ.ನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ವಿ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಪರಿಶಿಷ್ಟರ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವುದಾಗಿ ಒಪ್ಪಿಕೊಂಡಿದ್ದಾರೆ. ಎಸ್ ಸಿಎಸ್ ಪಿ/ ಟಿಎಸ್ ಪಿ ಗೆ ನಿಗದಿಯಾದ ಹಣವನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಬಾರದೆಂಬ ನಿಯಮ ಇದೆ. ಆದರೆ ರಾಜ್ಯ ಸರ್ಕಾರ ಇದನ್ನು ಉಲ್ಲಂಘಿಸುವ ಮೂಲಕ ದಲಿತ ಸಮುದಾಯಕ್ಕೆ ಮಹಾಮೋಸ ಮಾಡಿದೆ ಎಂದು ಟೀಕಿಸಿದ್ದಾರೆ.

ಎಸ್‌ಸಿಎಸ್‌ಪಿ, ಟಿಎಸ್‌ಪಿ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲೇ ಈ ವಿಚಾರವನ್ನು ಮುಚ್ಚಿಡುವ ಪ್ರಯತ್ನವನ್ನು ಸರ್ಕಾರ ನಡೆಸಿತ್ತು. 2023-24ನೇ ಸಾಲಿನ ಪರಿಷ್ಕೃತ ಬಜೆಟ್‌ನ ಲಿಂಕ್ ಡಾಕ್ಯುಮೆಂಟ್‌ನಲ್ಲಿ ಗ್ಯಾರಂಟಿ ಯೋಜನೆಗೆ ಈ ಹಣವನ್ನು ಬಳಸಿಕೊಂಡ ಬಗ್ಗೆ ದಾಖಲೆ ಇತ್ತು. ಸರ್ಕಾರ ಸತ್ಯವನ್ನು ಮುಚ್ಚಿ ಹಾಕಲು ನಡೆಸಿದ ಪ್ರಯತ್ನ ಬಯಲಾಗಿದೆ. ಸರ್ಕಾರ ನೀಡುವ ಯಾವುದೇ ಸಮರ್ಥನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ಒಂದು ಕೈಯಲ್ಲಿ‌ಕೊಟ್ಟು‌ ಇನ್ನೊಂದು ಕೈಯಲ್ಲಿ‌ ಕಿತ್ತುಕೊಳ್ಳುತ್ತಿದೆ. ಶೋಷಿತರ ಅಭಿವೃದ್ಧಿಯ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ನಿಗದಿಯಾದ ಹಣವನ್ನು ಬೇರೆ ಯೋಜನೆಗೆ ಬಳಸಿಕೊಳ್ಳುತ್ತಿರಲಿಲ್ಲ. ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಲಿ ಎಂದು ಸುನಿಲ್ ಕುಮಾರ್ ಕುಟುಕಿದ್ದಾರೆ.

 

Leave a Reply

Your email address will not be published. Required fields are marked *