ಮೂಡಬಿದಿರೆ : ಪಾಲಡ್ಕ ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕಡಂದಲೆ ಫಲ್ಕೆ ಗಣೇಶ ದರ್ಶನ ಸಭಾಭವನದಲ್ಲಿ ನಡೆಯಿತು.
ಕಡಂದಲೆ ವಿದ್ಯಗಿರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 83 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆ ಶಾಲೆಯಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ತಕ್ಷಣವೇ ಶೌಚಾಲಯ ನಿರ್ಮಿಸುವಂತೆ ಪಂಚಾಯತ್ ಸದಸ್ಯೆ ಸುನಿತಾ ಸುಚರಿತ ಶೆಟ್ಟಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಸಿಆರ್ ಪಿ ಅವರು ಶಿಕ್ಷಣ ಇಲಾಖೆಯಲ್ಲಿ ವರ್ಷಕ್ಕೆ 30000 ಮಾತ್ರ ಅನುದಾನ ಬರುತ್ತದೆ ಇದು ಇತರ ಕೆಲಸಗಳಿಗೆ ವಿನಿಯೋಗವಾಗುತ್ತಿದೆ. ಪಂಚಾಯಿತಿಯಿAದ ಶೌಚಾಲಯ ನಿರ್ಮಿಸಿದ್ದಾರೆ. ಅದು ಸರಿ ಇಲ್ಲದಿದ್ದರೆ ಮುಂದಿನ ಹಂತ ಬಂದಾಗ ಮೊದಲ ಆದ್ಯತೆ ನೀಡಿ ಶೌಚಾಲಯ ನಿರ್ಮಾಣ ಮಾಡುವ ಭರವಸೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಪ್ರತಿಭಾ ಅವರು ಮಾತನಾಡಿ ಶೌಚಾಲಯದ ಹದಗೆಟ್ಟಿರುವುದು ಮಾತ್ರವಲ್ಲ ಶಾಲೆಯ ಸನಿಹದಲ್ಲೇ ದೊಡ್ಡ ಮರಗಳು ಇರುವುದರಿಂದ ಶಾಲೆಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮರಗಳ ಗೆಲ್ಲುಗಳನ್ನು ತೆಗೆಯುವ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ಉಪವಲಯ ಅರಣ್ಯ ಅಧಿಕಾರಿ ಅಶ್ವಿತ್ ಗಟ್ಟಿ ಭರವಸೆ ನೀಡಿದರು. ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂದು ಮುಕ್ಕಡಪ್ಪು ಹಳೆಯ ಶಾಲೆಯನ್ನು ಮುಚ್ಚಲಾಗಿದ್ದು ಇಲ್ಲಿ ಅನೈತಿಕ ಚಟುವಟಿಕೆಗೆ ನಾವೇ ವ್ಯವಸ್ಥೆ ಮಾಡಿಕೊಟ್ಟದ್ದಾಗಿದೆ ಆದ್ದರಿಂದ ತಕ್ಷಣ ಇಲ್ಲಿ ಭದ್ರತಾ ವ್ಯವಸ್ಥೆಯನ್ನು ಮಾಡಿದರೆ ಉತ್ತಮ ಎಂದು ನಿವೃತ್ತ ಶಿಕ್ಷಕ ತುಕರಪ್ಪ ಟಿ ಕೆಂಬಾರೆ ಸಲಹೆ ನೀಡಿದರು. ಪೂಪಾಡಿಕಲ್ಲು ಕಡೆ ರಸ್ತೆಗೆ ಡಾಮರು ಹಾಕದೆ ಈಗಿರು ಮಣ್ಣಿನ ರಸ್ತೆ ಹೊಂಡ-ಗುAಡಿಗಳಿAದ ತುಂಬಿದ್ದು ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಈ ರಸ್ತೆಯನ್ನು ಯಾಕೆ ದುರಸ್ತಿ ಮಾಡುತ್ತಿಲ್ಲ? ನಾವೇನು ವೋಟ್ ಹಾಕಿಲ್ಲವೇ ಎಂದು ಜಾನಕಿ ವಸಂತವರು ಪ್ರಶ್ನಿಸಿದರು.ವಾರ್ಡಿನ ಸದಸ್ಯರು ಈ ಬಗ್ಗೆ ಗಮನ ಹರಿಸಬೇಕು ಅವರು ಹೇಳಿದರೆ ಮಾತ್ರ ನಮಗೆ ಗೊತ್ತಾಗುವುದೇ ಎಂದು ಹೇಳಿದ ಪಿಡಿಒ ರಕ್ಷಿತಾ ಡಿ ಅವರು ರಸ್ತೆ ದುರಸ್ತಿಗೆ ಮುಂದೆ ಅನುದಾನ ಇಡುವುದಾಗಿ ತಿಳಿಸಿದರು.
ನೀರಿನ ಬಿಲ್ ಕಟ್ಟುವವರಿಗೆ ಸರಿಯಾಗಿ ಮುಕ್ಕಾಲು ಗಂಟೆಯಾದರು ನೀರನ್ನು ಬಿಡಿ ಐದು ಹತ್ತು ನಿಮಿಷ ನೀರು ಬಿಟ್ಟರೆ ಏನು ಪ್ರಯೋಜನ ಎಂದು ಗ್ರಾಮಸ್ಥರಾದ ಲೆತಿಸಿಯಾ ದಾಂತಿಸ್ ಪ್ರಶ್ನಿಸಿದರು.ಕೆಲವರು ನೀರಿನ ಬಿಲ್ಲು ಕಟ್ಟದೆ ಬಾಕಿ ಇಟ್ಟಿದ್ದಾರೆ ಇದರಿಂದಾಗಿ ಪಂಪು ಆಪರೇಟರ್ ಗಳಿಗೆ ಸಂಬಳ ನೀಡಲು ಕಷ್ಟವಾಗುತ್ತಿದೆ ಆದ್ದರಿಂದ ಎಲ್ಲರೂ ನೀರಿನ ಬಿಲ್ಲನ್ನು ಸರಿಯಾಗಿ ಪಾವತಿಸುವಂತೆ ಪಿಡಿಒ ಹೇಳಿದರು. 94ಸಿಯಲ್ಲಿ ಮನೆ ಕಟ್ಟಿ ಕುಳಿತುಕೊಂಡವರಿಗೆ ಹಕ್ಕುಪತ್ರ ಸಿಗದಿರುವ ಬಗ್ಗೆ ಪಲಾನುಭವಿಗಳಾದ ಅಶೋಕ್ ಪೂಜಾರಿ ಸಭೆಯಲ್ಲಿ ಗಮನಕ್ಕೆ ತಂದರು. ಕಡಂದಲೆ ಗ್ರಾಮ ಆಡಳಿತ ಅಧಿಕಾರಿ ಸ್ವಾತಿ ಕೋಟ್ಯಾನ್ 94ಸಿ ಬಗ್ಗೆ ಉತ್ತರ ನೀಡಿದರು. ಪೂಪಾಡಿಕಲ್ಲು ಬಳಿ ನಿರ್ಮಾಣವಾಗುತ್ತಿರುವ ಕೆಪಿಟಿಸಿಎಲ್ ಕೇಂದ್ರದ ಬಳಿ ಕೆಂಪು ಕಲ್ಲಿನ ಕೋರೆ ಕಾರ್ಯಾಚರಿಸುತ್ತಿದ್ದು ಇದಕ್ಕೆ ಪಂಚಾಯತ್ ಅನುಮತಿ ನೀಡಿದೆಯಾ ಎಂದು ಟಿಎನ್ ಕೆಂಬಾರೆ ಪ್ರಶ್ನಿಸಿದರು. ಈ ಬಗ್ಗೆ ಪಂಚಾಯತ್ ಗಮನಕ್ಕೆ ಬಂದಿಲ್ಲ ಎಂದು ಪಿಡಿಒ ರಕ್ಷಿತಾ ಡಿ ಉತ್ತರಿಸಿದರು.
ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಯುಗೇದ್ರ ಇಲಾಖೆಯಲ್ಲಿ ಸಿಗುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪಶುಸಂಗೋಪನ ಸಹಾಯಕ ನಿರ್ದೇಶಕ ನೋಡಲ್ ಅಧಿಕಾರಿಯಾಗಿ ಇಲಾಖಾ ಮಾಹಿತಿ ನೀಡಿದರು. ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಚಂದ್ರಶೇಖರ್ ಅವರು ಮಕ್ಕಳಿಗೆ ಸಿಗುವ ಸ್ಕಾಲರ್‌ಶಿಪ್ ಬಗ್ಗೆ ಹಾಗೂ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಗ್ರಾಮದ ಆಡಳಿತ ಅಧಿಕಾರಿ ಪಾಲಡ್ಕ ದೀಪಿಕಾ,ಶ್ರೀಮತಿ ಶ್ವೇತಾ ಆರ್ ಕಡಂದಲೆ ಉಪಸ್ಥಿತರಿದ್ದರು.
ಪಂಚಾಯತ್ ಉಪಾಧ್ಯಕ್ಷರಾದ ಸುಕೇಶ್ ಶೆಟ್ಟಿ ಮತ್ತು ಸರ್ವ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.