ಮುಲ್ಕಿ: ಇಲ್ಲಿಗೆ ಸಮೀಪದ ಬಳ್ಕುಂಜೆ ಮಹಿಳಾ ಹಾಲು ಉತ್ಪಾದಕರ ಸಂಘದಿಂದ ಕಳ್ಳರು ಕಂಪ್ಯೂಟರ್ ಕಳವು ಮಾಡಿದ್ದಾರೆ.
ಕಳ್ಳರು ಹಾಲು ಉತ್ಪಾದಕರ ಸಂಘದ ಹಿಂಭಾಗದ ಕಿಟಕಿಯ ಕಬ್ಬಿಣದ ಸರಳು ತುಂಡರಿಸಿ ಒಳಭಾಗಕ್ಕೆ ಬಂದು ಕ್ಯಾಷ್ ಡ್ರಾವರ್ ಜಾಲಾಡಿ ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಬಳಿಕ ಡ್ರಾವರ್ ಮೇಲಿದ್ದ ಕಂಪ್ಯೂಟರ್ ಕಳ್ಳತನ ಮಾಡಿದ್ದಾರೆ .ಹೊರ ಹೋಗುವಾಗ ಎದುರಿನ ಬಾಗಿಲಿನ ಬದಿಯಲ್ಲಿ ಕಬ್ಬಿಣದ ಸೆಟರ್ ಹಾಕಿರುವ ಸಣ್ಣ ಕಿಟಿಕಿಯ ಒಳ ಭಾಗದ ಚಿಲಕ ತೆಗೆದು ಪರಾರಿಯಾಗಿದ್ದಾರೆ.
ಇದು ಎರಡನೇ ಬಾರಿ ಹಾಲಿನ ಸೊಸೈಟಿಯಲ್ಲಿ ಕಳ್ಳತನ ನಡೆದಿದೆ, ಕಳೆದ ವರ್ಷ ಸುಮಾರು ನಾಲ್ಕು ಸಾವಿರದಷ್ಟು ಹಣವನ್ನು ಇದೇ ಮಾದರಿಯಲ್ಲಿ ಕಳ್ಳತನ ಮಾಡಲಾಗಿತ್ತು ಎಂದು ಸೊಸೈಟಿ ಕಾರ್ಯದರ್ಶಿ ವನಿತಾ ಮಾಹಿತಿ ನೀಡಿದ್ದಾರೆ. ಯಾರೋ ಗೊತ್ತಿದ್ದವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು ಸಮೀಪದ ಅಂಗನವಾಡಿಯ ಬೀಗ ಮುರಿದು ಒಳಹೊಕ್ಕ ಕಳ್ಳರು ಏನು ಸಿಗದೆ ವಾಪಾಸಾಗಿದ್ದಾರೆ.
ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.