ಮೂಡುಬಿದಿರೆ: ಕಳೆದ 40 ವರ್ಷಗಳಿಂದ ಮೂಡಬಿದಿರೆ ಪರಿಸರದಲ್ಲಿ ಮನೆಮಾತಾಗಿದ್ದ ಅಮರಶ್ರೀ ಚಿತ್ರಮಂದಿರದ ಪರವಾನಿಗೆ ನವೀಕರಣವಾಗದ ಹಿನ್ನೆಲೆಯಲ್ಲಿ ತಕ್ಷಣವೇ ಎಲ್ಲಾ ಚಲನಚಿತ್ರ ಪ್ರದರ್ಶನಗಳನ್ನು ಸ್ಥಗಿತಗೊಳಿತಗೊಳಿಸುವಂತೆ ಹಾಗೂ ಹಾಲಿ ಪರವಾನಿಗೆಯನ್ನು ರದ್ದುಪಡಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬಾಡಿಗೆದಾರ ಹಾಗೂ ಚಿತ್ರಮಂದಿರದ ಮಾಲಕರ ನಡುವಿನ ಹಗ್ಗಜಗ್ಗಾಟದಿಂದ ಸಧ್ಯ ಅಮರಶ್ರೀ ಚಿತ್ರಮಂದಿರ ಮುಚ್ಚಲಾಗಿದ್ದು, ಸಾವಿರಾರು ಸಿನಿಪ್ರಿಯರಿಗೆ ತೀವೃ ನಿರಾಶೆಯಾಗಿದೆ.
ಏನಿದು ವಿವಾದ:
ಮಾಜಿ ಸಚಿವ ಅಮರನಾಥ ಶೆಟ್ಟಿ ಅವರ ಒಡೆತನದ ಅಮರಶ್ರೀ ಚಿತ್ರಮಂದಿರವನ್ನು ಈ ಹಿಂದೆ ಅಮರನಾಥ ಶೆಟ್ಟಿಯವರು ಬಾಡಿಗೆ ಆಧಾರದಲ್ಲಿ ಕಾರ್ಕಳದ ಜೆರಾಲ್ಡ್ ಕುಟಿನ್ಹೊ ಅವರಿಗೆ ನೀಡಿದ್ದರು. ತದನಂತರ 2020ರಲ್ಲಿ ಅಮರನಾಥ ಶೆಟ್ಟಿಯವರ ನಿಧನದಿಂದ ಹಾಗೂ ಅದೇ ಸಂದರ್ಭದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಚಿತ್ರ ಮಂದಿರಗಳನ್ನು ಮುಚ್ಚಲಾಗಿತ್ತು. ಅಮರನಾಥ ಶೆಟ್ಟಿಯವರ ನಿಧನದ ಬಳಿಕ ಈ ಚಿತ್ರಮಂದಿರದ ಮಾಲೀಕತ್ವ ಪತ್ನಿ ಹಾಗೂ ಮಕ್ಕಳ ಹೆಸರಿಗೆ ವರ್ಗಾವಣೆಯಾಗಿತ್ತು. ಇದಾದ ಬಳಿಕ ಅಮರನಾಥ ಶೆಟ್ಟಿಯವರ ಮಗಳಾದ ಅಮರಶ್ರೀ ಶೆಟ್ಟಿ ಚಿತ್ರಮಂದಿರವನ್ನು ಬಿಟ್ಟುಕೊಡುವಂತೆ ಜೆರಾಲ್ಡ್ ಕುಟಿನ್ಹೊ ಅವರಿಗೆ ಹಲವು ಬಾರಿ ಸೂಚಿಸಿದರೂ ಅವರು ಬಿಟ್ಟುಕೊಡಲು ಒಪ್ಪಿರಲಿಲ್ಲ,ಈ ನಡುವೆ ಚಿತ್ರಮಂದಿರದ ಪರವಾನಗಿ 2021ರ ಜನವರಿ 31ಕ್ಕೆ ಅಂತ್ಯವಾಗಿತ್ತು.ಪರವಾನಗಿ ನವೀಕರಣವಾಗದಿದ್ದರೂ ಚಿತ್ರಮಂದಿರವನ್ನು ಮಾಲೀಕರಿಗೆ ಬಿಟ್ಟುಕೊಡದೇ ಜೆರಾಲ್ಡ್ ಕುಟಿನ್ಹೊ ಕಾನೂನು ಉಲ್ಲಂಘಿಸಿ ನಿಯಮಬಾಹಿರವಾಗಿ ಚಿತ್ರಪ್ರದರ್ಶನ ನಡೆಸಿದ್ದು ಮಾತ್ರವಲ್ಲದೇ ಚಿತ್ರಮಂದಿರ ಬಿಟ್ಟು ಕೊಡುವಂತೆ ಸೂಚಿಸಿದ್ದರೂ ಒಪ್ಪದೇ ನಮಗೆ ಕಿರುಕುಳ ನೀಡುತ್ತಿದ್ದರು ಎಂದು ಅಮರಶ್ರೀ ಶೆಟ್ಟಿ ಆರೋಪಿಸಿದ್ದಾರೆ.
ಅಲ್ಲದೇ ತಂದೆಯವರ ನಡುವೆ ನಿಧನದ ಬಳಿಕ ಎಲ್ಲಾ ಹಕ್ಕುಗಳು ಅವರ ವಾರೀಸುದಾರರಿಗೆ ವರ್ಗಾವಣೆಯಾಗುವ ಹಿನ್ನೆಲೆಯಲ್ಲಿ ಯಾವುದೇ ಬಾಡಿಗೆ ಅಥವಾ ಲೀಸ್ ಕರಾರುಗಳು ಕೂಡ ವರ್ಗಾವಣೆಯಾಗುತ್ತವೆ. ಅಮರನಾಥ ಶೆಟ್ಟಿಯವರ ನಿಧನ ಬಳಿಕ ಈ ಚಿತ್ರಮಂದಿರ ಲೀಸ್ ನೀಡದೇ ಅವರ ಕುಟುಂಬದವರೇ ನಡೆಸಲು ತೀರ್ಮಾನಿಸಿದ್ದರು.ಅದರಂತೆ ಚಿತ್ರಮಂದಿರ ಬಿಟ್ಟುಕೊಡಲು ಸೂಚಿಸಿದ್ದರು. ಆದರೆ ಜೆರಾಲ್ಡ್ ಕುಟಿನ್ಹೊ ಬಿಟ್ಟುಕೊಡಲು ಒಪ್ಪದ ಹಿನ್ನೆಲೆಯಲ್ಲಿ ಇವರ ನಡುವೆ ಒಂದಷ್ಟು ವಾಗ್ವಾದ ಕೂಡ ನಡೆದಿತ್ತು ಎಂದು ತಿಳಿದುಬಂದಿದೆ.ಇದರ ಚಿತ್ರಮಂದಿರದ ನಿರ್ವಹಣೆ ಮಾಡದೇ ಚಿತ್ರಮಂದಿರಕ್ಕೂ ಹಾನಿಯಾಗಿದೆ ಈ ಹಿನ್ನೆಲೆಯಲ್ಲಿ ಯಥಾಸ್ಥಿತಿಯಲ್ಲೇ ಬಿಟ್ಟುಕೊಡಲು ಸೂಚಿಸಿದ್ದರೂ ಅವರು ಬಿಟ್ಟು ಕೊಡದೇ ದುರ್ವರ್ತನೆ ತೋರಿದ್ದರು ಎಂದು ಅಮರಶ್ರೀ ಶೆಟ್ಟಿ ಆರೋಪಿಸಿದ್ದಾರೆ.
ಇದರಿಂದ ಬೇಸತ್ತ ಅಮರನಾಥ ಶೆಟ್ಟಿಯವರ ಕುಟುಂಬ ಚಿತ್ರಮಂದಿರದ ಪರವಾನಗಿ ನವೀಕರಿಸದೇ ಕಳೆದ ಎರಡು ವರ್ಷಗಳಿಂದ ಕಾನೂನು ಉಲ್ಲಂಘಿಸಿ ಚಿತ್ರಪ್ರದರ್ಶನ ಮಾಡಲಾಗಿದ್ದು ತಕ್ಷಣವೇ ಈ ಚಿತ್ರ ಮಂದಿರಕ್ಕೆ ನೀಡಿದ್ದ ಪರವಾನಗಿ ರದ್ದುಪಡಿಸುವಂತೆ ಕೋರಿ ಎಲ್ಲಾ ದಾಖಲೆಗಳ ಸಹಿತ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು.
ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಚಿತ್ರಮಂದಿರಕ್ಕೆ ನೀಡಲಾಗಿದ್ದ ಪರವಾನಗಿ ಹಾಗೂ ಇತರೇ ಎಲ್ಲಾ ನಿರಾಕ್ಷೇಪಣಾ ಪತ್ರಗಳನ್ನು ರದ್ದುಪಡಿಸಿ ಚಿತ್ರಪ್ರದರ್ಶನಗಳನ್ನು ತಕ್ಷಣದಿಂದಲೇ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
ಒಟ್ಟಿನಲ್ಲಿ ಚಿತ್ರಮಂದಿರದ ಪರವಾನಗಿ ನವೀಕರಿಸದೇ ಬರೋಬ್ಬರಿ ಎರಡು ವರ್ಷಕ್ಕೂ ಮಿಕ್ಕಿ ಅನಧಿಕೃತವಾಗಿ ಚಿತ್ರಪ್ರದರ್ಶನ ನಡೆಸಿದ್ದ ಅಮರಶ್ರೀ ಚಿತ್ರಮಂದಿರ ಬಾಡಿಗೆದಾರ ಹಾಗೂ ಮಾಲಕರ ನಡುವಿನ ಜಟಾಪಟಿಯಿಂದ ಬಂದ್ ಆಗಿದ್ದು,ಸಾವಿರಾರು ಸಿನಿಮಾ ಪ್ರಿಯರಿಗೆ ಮಾತ್ರ ತೀವ್ರ ನಿರಾಸೆಯಾಗಿದೆ.