ಬೆಂಗಳೂರು : ರಾಜ್ಯಾದ್ಯಂತ ಶುಕ್ರವಾರದಿಂದ ಮದ್ಯದ ದುಬಾರಿ ದರ ಜಾರಿಗೆ ಬಂದಿದ್ದು, ಬಾಟಲಿ ಮೇಲೆ ಶೇ.2ರಿಂದ ಶೇ.20ರವರೆಗೆ ಬೆಲೆ ಹೆಚ್ಚಳವಾಗಿದ್ದು, ಇದು ಸಹಜವಾಗಿ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ.
ಬಜೆಟ್‌ನಲ್ಲಿ ಘೋಷಿಸಿದ್ದಂತೆ ಅಬಕಾರಿ ಸುಂಕವನ್ನು ಶೇ.20ರವರೆಗೆ ಹೆಚ್ಚಿಸಿರುವ ಕಾರಣದಿಂದ ಮದ್ಯದ ದರ ಹೆಚ್ಚಾಗಿದೆ. ನಿರೀಕ್ಷೆಯಂತೆ ಶುಕ್ರವಾರದಿಂದಲೆ ಹೊಸ ದರ ಜಾರಿಗೆ ಬಂದಿದೆ. ಪಂಚತಾರಾ ಹೊಟೆಲ್‌ಗಳು ಸೇರಿ ಇತರೆಡೆ ಸರ್ವಿಸ್ ಚಾರ್ಜ್ ಸೇರಿಸಿದರೆ ಹೊಸ ದರಕ್ಕೆ ಮತ್ತಷ್ಟು ಮೊತ್ತ ಸೇರ್ಪಡೆಯಾಗಲಿದೆ.
ಕಿಂಗ್‌ಫಿಷರ್ ಬಿಯರ್ 5 ರಿಂದ 10 ರುಪಾಯಿ ಹೆಚ್ಚಳವಾಗಿದೆ. ಬಕಾರ್ಡಿ ಲೆಮನ್ ಸಿಟ್ರಸ್ 750 ಎಎಲ್‌ಗೆ .2189, ಬ್ಲ್ಯಾಕ್‌ಡಾಗ್ .4043 ದರ ತಲುಪಿವೆ. ಒಟಿ ವಿಸ್ಕಿ 180 ಎಂಎಲ್‌ಗೆ .87ರಿಂದ .100 ಆಗಿದೆ. ಸ್ಮಿರ್ನಾಫ್ ಆ್ಯಪಲ್/ಆರೆಂಜ್ 750 ಎಂಎಲ್‌ಗೆ .1839ರಿಂದ .2164ಕ್ಕೆ ಏರಿದೆ ಎಂದು ಮದ್ಯ ವರ್ತಕರು ತಿಳಿಸಿದ್ದಾರೆ. ಮೊದಲ ದಿನ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. ಆದರೆ, ಇನ್ನೊಂದು ವಾರ, ಹದಿನೈದು ದಿನಗಳು ಕಳೆದರೆ ಗ್ರಾಹಕರಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂಬುದು ತಿಳಿಯಲಿದೆ ಎಂದು ಬೆಂಗಳೂರು ಮದ್ಯ ವರ್ತಕರ ಸಂಘ ತಿಳಿಸಿದೆ.
ಈಗಾಗಲೇ ಕರ್ನಾಟಕ ಮದ್ಯಪ್ರಿಯರ ಸಂಘ ದರ ಏರಿಕೆಯನ್ನು ವಿರೋಧಿಸಿದೆ. ರಾಜ್ಯ ಸರ್ಕಾರ ಏರಿಸಿರುವ ಈ ಅಬಕಾರಿ ಸುಂಕವನ್ನು ಇಳಿಸಬೇಕು. ಇಲ್ಲವೇ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಈ ಮಧ್ಯೆ ರಾಜ್ಯದ ದಕ್ಷಿಣ ಭಾಗದಲ್ಲಿ ಮಿಲಿಟರಿಯಿಂದ ಬರುವ ಮದ್ಯದ ಅಕ್ರಮ ಸಾಗಾಟ ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ನಗರಗಳ ಹೊರವಲಯದಲ್ಲಿ ಇವುಗಳ ಹೆಚ್ಚಿನ ವಹಿವಾಟು ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇವುಗಳ ಬಗ್ಗೆ ಕಡಿವಾಣ ಹಾಕಬೇಕು ಎಂದು ರಾಜ್ಯ ಮದ್ಯ ವರ್ತಕರ ಸಂಘ ಆಗ್ರಹಿಸಿದೆ. ಅದೇ ರೀತಿ ಗೋವಾದಿಂದ ಅಗ್ಗದ ಬೆಲೆಗೆ ಸಿಗುವ ಮದ್ಯ ಗಡಿ ಭಾಗದಲ್ಲಿರುವ ಕಾರವಾರ ಜಿಲ್ಲೆ, ಬೆಳಗಾವಿಗೆ ಹೆಚ್ಚಿನದಾಗಿ ಹರಿದುಬರುವ ಸಾಧ್ಯತೆ ಇದೆ. ಅದರಿಂದ ನಮಗೆ ನಷ್ಟವಾಗಲಿದೆ. ಅಲ್ಲದೆ, ಕಳ್ಳಬಟ್ಟಿ, ಶೇಂದಿ, ನೀರಾದಂತಹ ಅಕ್ರಮ ಚಟುವಟಿಕೆ ಹೆಚ್ಚಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ