ಕಾರ್ಕಳ: ಜೀವನದಲ್ಲಿ ಜಿಗುಪ್ಸೆಗೊಂಡು ಚಾಲಕನೋರ್ವ ತನ್ನ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 12ರಂದು ಬುಧವಾರ ಮುಂಜಾನೆ ನಡೆದಿದೆ.
ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಕುಂಟಿಬೈಲು ರಾಮೇರುಗುತ್ತು ನಿವಾಸಿ ಹರೀಶ್ ಶೆಟ್ಟಿ(52) ಎಂಬುವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಹರೀಶ್ ಶೆಟ್ಟಿ ಖಾಸಗಿ ಬಸ್ಸುಗಳಿಗೆ ಬದಲಿ ಚಾಲಕನಾಗಿ ಹೋಗುತ್ತಿದ್ದರು ಇದರ ಜತೆಗೆ ಬಿಡುವಿನ ವೇಳೆ ರಿಕ್ಷಾ ಚಾಲನೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲವಾದರೂ ಮದ್ಯಪಾನದ ಚಟದಿಂದ ಬೇಸತ್ತು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಹರೀಶ್ ಶೆಟ್ಟಿ ಪತ್ನಿ ಹಾಗೂ ಮಕ್ಕಳು ಮಂಗಳವಾರ ತವರು ಮನೆಗೆ ತೆರಳಿದ್ದು, ಹರೀಶ್ ಶೆಟ್ಟಿ ಬುಧವಾರ ಮುಂಜಾನೆ ಬಜಗೋಳಿ ಪೇಟೆಗೆ ಹೋಗಿ ಬಂದವರು ಬಳಿಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶವ ಮೇಲೆತ್ತಲು ನೆರವಾದ ಅಗ್ನಿಶಾಮಕ ದಳ
ಹರೀಶ್ ಶೆಟ್ಟಿ ಸುಮಾರು 25 ಅಡಿ ಆಳದ ಬಾವಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಶವ ಮೇಲೆತ್ತಲು ಸ್ಥಳೀಯರು ಪ್ರಯತ್ನಪಟ್ಟರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ ಬಳಿಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್ ನೇತೃತ್ವದ ತಂಡ ಶವ ಮೇಲಕ್ಕಿತ್ತಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.