ಬೆಂಗಳೂರು: ಸರ್ಕಾರದ ವಿರುದ್ಧ ನಾವು ಯಾರೂ ಕಮಿಷನ್ ಆರೋಪ ಮಾಡಿಲ್ಲ. ಯಾರೋ ಮೂರನೇ ವ್ಯಕ್ತಿ ಆರೋಪ ಮಾಡಿರಬಹುದು. ಕೆಲವೊಂದಿಷ್ಟು ಹಣ ಬಿಡುಗಡೆ ಕೂಡ ಆಗಿದೆ. ಏಳು ತಿಂಗಳ ಕಾಮಗಾರಿಯ ಬಾಕಿ ಹಣ ಬರಬೇಕು. ಬಾಕಿ ಬಿಲ್ ಪಾವತಿಗೆ ಈಗಾಗಲೇ ಸಿಎಂ ಬಳಿ ನಾವು ಮನವಿ ಮಾಡಿದ್ದೇವೆ. ನಮಗೆ ಯಾವ ಸಚಿವರು ಕಮಿಷನ್ ಕೇಳಿಲ್ಲ. ಕಮಿಷನ್ ಕೇಳಿದ್ದಾರೆ ಎಂದು ಗುತ್ತಿಗೆದಾರರು ನನ್ನ ಬಳಿ ಹೇಳಿಲ್ಲ ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸ್ಪಷ್ಟಪಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಆರೋಪಿಸುತ್ತಿರುವ ಕಮಿಷನ್ ಆರೋಪಕ್ಕೆ ಕೆಂಪಣ್ಣ ಅವರು ಕ್ಲೀನ್ ಚೀಟ್ ನೀಡಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೆಲವಷ್ಟು ಹಣ ಬಿಡುಗಡೆಯಾಗಿದೆ. ಆದರೆ ಅದು ಸಾಲುವುದಿಲ್ಲ. 7 ತಿಂಗಳಿನ ಬಾಕಿ ಹಣ ಬರಬೇಕು ಎಂದು ಸಿಎಂ ಸಿದ್ಧರಾಮಯ್ಯರಲ್ಲಿ ಮನವಿ ಮಾಡಿದ್ದೇವೆ. ಅವರು ನಾನು ಬಂದು 3 ತಿಂಗಳಾಗಿದೆ, ನಮ್ಮ ಕುತ್ತಿಗೆ ಮೇಲೆ ಕೂತಿದ್ದೀರಿ ಎಂದರು. ಕಂಟ್ರಾಕ್ಟರ್ಸ್ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಮುಖ್ಯಮಂತ್ರಿಗೆ ತಿಳಿಸಿದ್ದೇವೆ ಎಂದರು.
ನಾವು ಮೊದಲು ಆರಂಭ ಮಾಡಿದಾಗ ಸಿಎಂ ಯಡಿಯೂರಪ್ಪಗೆ ಪತ್ರ ಕೊಟ್ಟೆವು. ಬಳಿಕ ಪ್ರಧಾನಿ ಗೆ ಪತ್ರ ಕೊಟ್ಟೆವು. ಸಿದ್ದರಾಮಯ್ಯ, ಕುಮಾರಸ್ವಾಮಿ ಹೀಗೆ ಹಲವರಿಗೆ ಪತ್ರ ಕೊಟ್ಟೆವು. ಕುಮಾರಸ್ವಾಮಿ ನಮ್ಮ ಕೇಸ್ ತೆಗೆದುಕೊಳ್ಳಲಿಲ್ಲ. ಸಿದ್ದರಾಮಯ್ಯ ಕೂಡ ಕೇಸ್ ತೆಗೆದುಕೊಳ್ಳಲಿಲ್ಲ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಕರೆದಿದ್ದಕ್ಕೆ ಹೋಗಿದ್ದೆ. ಈಗ ಬಿಜೆಪಿ ವಿಪಕ್ಷ ನಾಯಕ ಕರೆಯಲಿ ಹೋಗುತ್ತೇನೆ. ನಾವು ಕಂಟ್ರಾಕ್ಟರ್ಸ್, ನಾನು ಕಂಟ್ರಾಕ್ಟರ್ಸ್ ಪರವಾಗಿ ಮಾತ್ರ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. 25 ಸಾವಿರ ಕೋಟಿ ರೂ. ಬಾಕಿ ಇದೆ. ಸರ್ಕಾರ ಎಲ್ಲರಿಗೂ ಭಾಗ್ಯಗಳನ್ನು ಕೊಡುತ್ತಿದೆ. ನಾವು ಕೆಲಸ ಮಾಡಿರುವುದಕ್ಕೆ ನಮಗೂ ಭಾಗ್ಯ ಕೊಡಿ, ಸರ್ಕಾರ ಬಂದು ಮೂರು ತಿಂಗಳಾದರೂ ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇವೆ. ನಾವು ಡೆಡ್ ಲೈನ್ ಕೊಡುತ್ತಿಲ್ಲ. ಆದರೆ ನಮಗೆ ಈಗಲೇ ಹಣ ಬಿಡುಗಡೆ ಆಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.