ಕಾರ್ಕಳ:ದಲಿತ ಮಹಿಳೆಯೊಬ್ಬರ ಖಾಸಗಿ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ ಸ್ಮಶಾನ ನಿರ್ಮಾಣಕ್ಕಾಗಿ ನೆಲ ಸಮತಟ್ಟು ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ಪಂಚಾಯಿತಿ ಸದಸ್ಯನ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಪೇರಳದಬೆಟ್ಟು ನಿವಾಸಿ ದಲಿತ ಸಮುದಾಯದ ಸಂಪ ಎಂಬವರ ಖಾಸಗಿ ಜಾಗದಲ್ಲಿ ಪಂಚಾಯಿತಿ ಸದಸ್ಯ ರಮೇಶ್ ಎಂಬವರು ಜೆಸಿಬಿ ಬಳಸಿ ಸ್ಮಶಾನ ನಿರ್ಮಾಣ ಕಾಮಗಾರಿಗೆ ಜೆಸಿಬಿ ಬಳಸಿ ನೆಲ ಸಮತಟ್ಟು ಮಾಡಲು ಮುಂದಾದಾಗ ಸಂಪ ಎಂಬವರು ನನ್ನ ಪಟ್ಟಾ ಜಾಗದಲ್ಲಿ ಸ್ಮಶಾನ ನಿರ್ನಾಮ ಮಾಡಬೇಡಿ ಎಂದು ಆಕ್ಷೇಪಿಸಿದಾಗ, ನೀನು ಕೀಳು ಜಾತಿಯಲ್ಲಿ ಹುಟ್ಟಿದ್ದು ಊರಿನ ಜಾಗವೆಲ್ಲ ನಿನ್ನದೇ ಆಗಿದೆಯೇ ಎಂದು ನಿಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೇ ಸ್ಮಶಾನದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುತ್ತೇವೆ ನಿನಗೆ ಏನೂ ಮಾಡಲು ಸಾಧ್ಯ ಎಂದು ಬೆದರಿಸಿ ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ದಲಿತ ಮಹಿಳೆಯನ್ನು ಬೆದರಿಸಿ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ರಮೇಶ್ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ