ಕಾರ್ಕಳ:ಮೂಲಸೌಕರ್ಯ, ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿಯನ್ನಾಗಿಸಿದ ಕಾರ್ಕಳ ಶಾಸಕರಿಗೆ ಕೇವಲ ಶಂಕುಸ್ಥಾಪನೆಗೆ ಮೀಸಲಾಗಿರುವ ಕಾಂಗ್ರೆಸ್ ಪಕ್ಷದ ಬಿಟ್ಟಿ ಸಲಹೆ ಬೇಡ, ಮಾಜಿ ಮುಖ್ಯಮಮತ್ರಿ ವೀರಪ್ಪ ಮೊಯ್ಲಿಯವರು ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಅಭಿವೃದ್ಧಿ ಎನ್ನುವುದು ಕೇವಲ ಶಂಕುಸ್ಥಾಪನೆಗೆ ಮಾತ್ರ ಸೀಮಿತ ಎನ್ನುವ ಮನಸ್ಥಿತಿಯಲ್ಲಿದ್ದಾರೆ.ಆದರೆ ಕಾರ್ಕಳ ಶಾಸಕರು ಹಾಕಿಕೊಂಡಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವುದೇ ಅವರ ಬದ್ಧತೆಯಾಗಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳದಲ್ಲಿ ಸ್ಥಾಪನೆಯಾಗಲಿರುವ ಜವಳಿ ಪಾರ್ಕ್ ಯೋಜನೆಯ ವಿಚಾರದಲ್ಲಿ ಕಾಂಗ್ರೆಸ್ ವಕ್ತಾರರೊಬ್ಬರು ಬಾಲಿಶ ಪತ್ರಿಕಾ ಹೇಳಿಕೆ ನೀಡಿದ್ದು, ಅವರಿಗೆ ಜವಳಿ ಪಾರ್ಕ್ ಯೋಜನೆಯ ಪರಿಕಲ್ಪನೆ ಏನೆಂದು ತಿಳಿದಿದೆಯೇ?ಸರ್ಕಾರದ ಅನುದಾನದ ಜತೆಗೆ ಖಾಸಗಿ ಸಹಭಾಗಿತ್ವವನ್ನು ಜೋಡಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ. ಸಾವಿರಾರು ಬಡ ಕಟುಂಬಗಳು ಬದುಕು ಕಟ್ಟಿಕೊಳ್ಳಬೇಕು ಎನ್ನುವ ದೂರದೃಷ್ಟಿಯನ್ನಿಟ್ಟುಕೊಂಡು ಈ ಮಹಾತ್ವಾಕಾಂಕ್ಷೆಯ ಯೋಜನೆ ಮಂಜೂರುಗೊಳಿಸಲಾಗಿದೆ. ಈ ಯೋಜನೆಯ ತಾಂತ್ರಿಕ ವಿಚಾರಗಳ ಕುರಿತು ಏನೂ ಮಾಹಿತಿ ಇಲ್ಲದೇ ಈ ಯೋಜನೆಯೇ ವಿಫಲವಾಗಿದೆ ಎನ್ನುವ ಸುಳ್ಳು ಆರೋಪವನ್ನು ಮಾಡುತ್ತಿರುವ ಕಾಂಗ್ರೆಸ್ ವಕ್ತಾರರು ಮೊದಲು ಯೋಜನೆಯ ಕಡತವನ್ನು ಸವಿಸ್ತಾರವಾಗಿ ತಿಳಿದು ಬಳಿಕ ಮಾತನಾಡಲಿ ಎಂದು ಮಹಾವೀರ ಹೆಗ್ಡೆ ಸವಾಲು ಹಾಕಿದ್ದಾರೆ
ಸರ್ಕಾರಗಳು ಬದಲಾದಾಗ ಆ ಕಾಲಘಟ್ಟದಲ್ಲಿ ಮಂಜೂರಾತಿಯಾಗಿರುವ ಯೋಜನೆಗಳಿಗೆ ಕೊಕ್ಕೆ ಹಾಕುವ ಪರಿಪಾಠ ಸಲ್ಲದು,ಆದ್ದರಿಂದ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾತಿಯಾಗಿರುವ ಜವಳಿ ಪಾರ್ಕ್ ಯೋಜನೆಯನ್ನು ಮುಂದುವರಿಸುವ ಹೊಣೆಗಾರಿಕೆ ಹಾಲಿ ರಾಜ್ಯ ಸರ್ಕಾರದ ಮೇಲಿದೆ ಎಂದಿದ್ದಾರೆ.
ಸಾವಿರಾರು ಜನರಿಗೆ ಉದ್ಯೋಗ ನೀಡಬೇಕೆನ್ನುವ ಹಾಗೂ ಕಾರ್ಕಳವನ್ನು ಕೈಗಾರಿಕಾ ಹಬ್ ಮಾಡಬೇಕೆನ್ನುವ ಕಲ್ಪನೆಯನ್ನು ಮುಂದಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಕಾರ್ಕಳದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವುದು ಶತಃಸಿದ್ದ, ಕಾರ್ಕಳದ ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ಶಾಸಕರಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಬದ್ಧತೆಯಿದೆ,ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ಯೋಜನೆ ಕಾರ್ಯಗತಗೊಂಡು ಕಾರ್ಕಳ ಕ್ಷೇತ್ರದ ಜನರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಸಿಗುವಂತಾಗುತ್ತದೆ ಎಂದು ಮಹಾವೀರ ಹೆಗ್ಡೆ ತಿಳಿಸಿದ್ದಾರೆ.