Share this news

ಬೆಂಗಳೂರು: ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆ ಜಾರಿಯಿಂದ ಆಗಿರುವ ನಷ್ಟವನ್ನು ಸರಿದೂಗಿಸಲು ಪ್ರತಿ ತಿಂಗಳಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಬೆಂಗಳೂರಿನ ಆಟೋ ರಿಕ್ಷಾ ಚಾಲಕರು ಸರಕಾರವನ್ನು ಆಗ್ರಹಿಸಿದ್ದಾರೆ.

ಬೆಂಗಳೂರು ಆಟೋ ಚಾಲಕರ ಸಂಘಗಳ ಒಕ್ಕೂಟವು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹಲವಾರು ಆಟೋ ಮತ್ತು ಟ್ಯಾಕ್ಸಿ ಚಾಲಕರು ತಮಗೆ ಆಗುತ್ತಿರುವ ನಷ್ಟದ ಬಗ್ಗೆ ಸರಕಾರ ನಿರ್ಲಕ್ಷ್ಯ ವಹಿಸಿದೆ. ಈಗಾಗಲೇ ತಮ್ಮ ಆದಾಯವನ್ನು ಬೈಕ್ ಟ್ಯಾಕ್ಸಿಗಳು ಕಬಳಿಸುತ್ತಿದ್ದು, ಈಗ ಶಕ್ತಿ ಯೋಜನೆ ಜಾರಿಯಿಂದ ತಮ್ಮ ಜೀವನ ನಿರ್ವಹಣೆಯೇ ದುಸ್ತರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಮಸ್ಯೆಗಳಿಂದಾಗಿ ಅನೇಕ ಚಾಲಕರು ಮನೆ ಬಾಡಿಗೆ ಪಾವತಿಸಲು, ಸಾಲವನ್ನು ಮರುಪಾವತಿಸಲು ಮತ್ತು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ. ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವ ಕುರಿತು ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆ ಈಡೇರಿಸಬೇಕು. ಈ ಮೂಲಕ ಆಟೋ ಚಾಲಕರ ಗುಂಪಿಗೆ ಸಹಾಯ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಬೇಡಿಕೆಗಳಲ್ಲದೆ, ಅಸಂಘಟಿತ ವಾಣಿಜ್ಯ ಚಾಲಕರಿಗೆ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಮತ್ತು ಸರ್ಕಾರದ ವಿವಿಧ ಅಭಿವೃದ್ಧಿ ಮಂಡಳಿಗಳ ಮೂಲಕ 2 ಲಕ್ಷ ರೂ.ವರೆಗೆ ಕಡಿಮೆ ಬಡ್ಡಿದರದ ಸಾಲವನ್ನು ಒದಗಿಸುವಂತೆ ಒಕ್ಕೂಟವು ಸರ್ಕಾರವನ್ನು ಒತ್ತಾಯಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *