ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಲಾಗಿದ್ದು, ಮಹಿಳೆಯರು ಆಟೋ ಹಾಗೂ ಖಾಸಗಿ ಬಸ್ ಬಿಟ್ಟು ಕೆಎಸ್‌ಆರ್‌ಟಿಸಿ ಬಸ್ ಮೊರೆ ಹೋಗಿದ್ದಾರೆ.
ಈ ಮಧ್ಯೆ ಶಕ್ತಿ ಯೋಜನೆಯಿಂದಾಗಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರಿಲ್ಲದೆ ಬಸ್ ಮಾಲಕರು ಕಂಗಾಲಾಗಿದ್ದಾರೆ. ಅಲ್ಲದೆ ಆಟೋರಿಕ್ಷಾಗಳಿಗೂ ಬಾಡಿಗೆ ಸಿಗುತ್ತಿಲ್ಲ ಎಂದು ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಖಾಸಗಿ ಬಸ್, ಟ್ಯಾಕ್ಸಿ ಮತ್ತು ಆಟೋ ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಜುಲೈ 27 ರಂದು ಬಂದ್‌ಗೆ ಕರೆ ನೀಡಿವೆ.
ಜುಲೈ 27ರಂದು ಬೆಳಿಗ್ಗೆ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ರ‍್ಯಾಲಿ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಇಂದು(ಜುಲೈ 20) ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ 12 ಗಂಟೆಗೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸುದ್ದಿಗೋಷ್ಠಿ ಕರೆದಿದ್ದು, ಬಂದ್‌ಬಗ್ಗೆ ವಿವರವಾಗಿ ತಿಳಿಸಲಿದೆ. ಈ ಸುದ್ದಿಗೋಷ್ಟಿಯಲ್ಲಿ ಆಟೋ,ಕ್ಯಾಬ್, ಟ್ಯಾಕ್ಸಿ, ಓಲಾ,ಉಬರ್ ಹಾಗೂ ಖಾಸಗಿ ಬಸ್ ಸೇರಿದಂತೆ 23 ಸಂಘಟನೆಗಳು ಭಾಗಿಯಾಗಲಿದ್ದಾರೆ.
ಶಕ್ತಿ ಯೋಜನೆಗೆ ಖಾಸಗಿ ಬಸ್‌ಗಳನ್ನು ಪರಿಗಣಿಸುವಂತೆ ಈ ಹಿಂದೆ ಸರ್ಕಾರ ಪತ್ರ ಬರೆಯಲಾಗಿತ್ತು. ಆದ್ರೆ, ಖಾಸಗಿ ಬಸ್ ಮಾಲೀಕರು ಸಂಘಟದ ಪತ್ರಕ್ಕೆ ಸರ್ಕಾರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.