ನಾಗ್ಪುರ (ಜು.15): ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿದ್ದ ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ಜಯೇಶ್ ಪೂಜಾರಿ, ಭಯೋತ್ಪಾದಕ ಕೇಸಿನಲ್ಲಿ ದೋಷಿಯಾಗಿ ಕರ್ನಾಟಕದ ಜೈಲಿನಲ್ಲಿರುವ ಉಗ್ರ ಅಫ್ಸರ್ ಪಾಷಾ ಜತೆ ಸಂಪರ್ಕದಲ್ಲಿದ್ದಾನೆ. ಅಲ್ಲದೇ ಬೆದರಿಕೆ ಕರೆ ಮಾಡಿದಾಗ ಪಾಷಾ ಜತೆಗೇ ಪೂಜಾರಿ ಬೆಳಗಾವಿ ಜೈಲಿನಲ್ಲಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ನಾಗ್ಪುರದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ಜನವರಿಯಲ್ಲಿ ಬೆಳಗಾವಿ ಜೈಲಿನಲ್ಲಿದ್ದ ಕೈದಿ ಜಯೇಶ್ ಪೂಜಾರಿ, ನಾಗ್ಪುರದಲ್ಲಿರುವ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಕರೆ ಮಾಡಿ, ತಾನು ದಾವೂದ್ ಇಬ್ರಾಂಹಿ ಗ್ಯಾಂಗ್ ಸದಸ್ಯ ಹಾಗೂ 100 ಕೋಟಿ ಕೊಡದಿದ್ದರೆ ಕೊಲೆ ಮಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಆತನನ್ನು ಬೆಳಗಾವಿ ಜೈಲಿಂದ ನಾಗ್ಪುರಕ್ಕೆ ಕರೆತರಲಾಗಿತ್ತು. ಪ್ರಕರಣದ ತನಿಖೆ ವೇಳೆ ಜಮ್ಮು- ಕಾಶ್ಮೀರದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯೊAದಿಗೆ ಸಂಪರ್ಕದಲ್ಲಿದ್ದ ಹಾಗೂ ಅವರಿಗೆ ಸಹಾಯ ಮಾಡಿದ್ದ ಕೇಸಲ್ಲಿ ಅಪರಾಧಿಯಾಗಿ ಬಂಧಿತನಾಗಿರುವ ಪಾಷಾ ಜತೆ ಪೂಜಾರಿ ಸಂಪರ್ಕದಲ್ಲಿದ್ದಾನೆ ಎನ್ನುವ ವಿಚಾರ ಬೆಳಿಕಿಗೆ ಬಂದಿದೆ ಎಂದು ನಾಗ್ಪುರ ಪೊಲೀಸರು ತಿಳಿಸಿದ್ದಾರೆ. 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲೂ ಪಾಷಾ ಭಾಗಿಯಾಗಿದ್ದ.
ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಮಂಗಳೂರು ಮೂಲಕ ಜಯೇಶ ಪೂಜಾರಿ ಎಂಬ ಕೈದಿ, ಜೈಲಿನಲ್ಲಿಯೇ ಇದ್ದುಕೊಂಡು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಜ.14ರಂದು ಕರೆ ಮಾಡಿ .100 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದನು. ಒಂದು ವೇಳೆ ಕೊಡದಿದ್ದರೆ ಬಾಂಬ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದನು. ಈ ಕುರಿತು ಮಹಾರಾಷ್ಟ್ರ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಈ ಕರೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಬಂದಿರುವುದು ಎಂದು ಖಚಿತಪಡಿಸಿಕೊಂಡು ಪರಿಶೀಲನೆ ನಡೆಸಿದ್ದರು. ಆದರೆ ಈ ಘಟನೆ ಮಾಸುವ ಮುನ್ನವೇ ಮಾ.21ರಂದು ಎರಡನೇ ಬಾರಿಗೆ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಎಂಬಾತನ ಹೆಸರಿನಲ್ಲಿ ಮಹಾರಾಷ್ಟ್ರದ ನಾಗ್ಪುರದ ನಿತಿನ್ ಗಡ್ಕರಿ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿ .10 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿರುವ ಗಡ್ಕರಿ ಕಚೇರಿಗೆ ಬಿಗಿ ಜೀವ ಬೆದರಿಕೆ ಕರೆ ಎಲ್ಲಿಂದ ಬಂದಿತ್ತು ಎಂಬ ಬಗ್ಗೆ ಮಹಾರಾಷ್ಟ್ರ ಎಟಿಎಸ್ ಪೊಲೀಸರು ತನಿಖೆ ಕೈಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಮಾ.28ರಂದು ಬಂಧಿತ ಜಯೇಶ ಪೂಜಾರಿಯನ್ನು ನಾಗ್ಪುರ ಪೊಲೀಸರು ವಶಕ್ಕೆ ಪಡೆದುಕೊಂಡು ತಮ್ಮೊಂದಿಗೆ ಕರದೊಯ್ದಿದ್ದರು.