ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದರೂ ಪ್ರತಿಪಕ್ಷ ಬಿಜೆಪಿಯಲ್ಲಿ ವಿಪಕ್ಷ ನಾಯಕ ಯಾರು ಎನ್ನುವ ಚರ್ಚೆಗಳು ನಡೆಯುತ್ತಲ್ಲೇ ಇವೆ. ಸರ್ಕಾರದ ಮೊದಲ ಅಧಿವೇಶನ ಮುಕ್ತಾಯಗೊಂಡರೂ ಇನ್ನೂ ವಿರೋಧ ಪಕ್ಷದ ನಾಯಕ ಯಾರು ಎನ್ನುವ ಪ್ರಶ್ನೆಯ ನಡುವೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗಾಡ ಮಹತ್ವದ ಹೇಳಿಕೆ ನೀಡಿದ್ದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಸಿ.ಟಿ.ರವಿ ಬಿಜೆಪಿ ರಾಜ್ಯಾಧ್ಯಕ್ಷರಾಗಲಿದ್ದು, ವಿಪಕ್ಷ ನಾಯಕರಾಗಿ ಬಸನಗೌಡ ಪಾಟೀಲ್ ಯತ್ನಾಳ್ ಎಂದು ಬಹುತೇಕ ತೀರ್ಮಾನವಾಗಿದೆ ಎನ್ನುವ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಬಹಳ ಮಹತ್ವ ಪಡೆದುಕೊಂಡಿದ್ದು ಇದು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕುರಿತು ಹೊಸ ಚರ್ಚೆಗೆ ನಾಂದಿಯಾಗಿದೆ.
ಮುಂಬರುವ ಲೋಕಸಭೆಯ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದೇವೇಗೌಡರು ನೀಡಿದ ಈ ಹೇಳಿಕೆ ಬಿಜೆಪಿ ಜತೆಗಿನ ಮೈತ್ರಿಯ ಒಂದು ಭಾಗವೆಂದು ವಿಶ್ಲೇಷಿಸಲಾಗಿದೆ.ಆದರೆ ದೇವೇಗೌಡರು ಬಿಜೆಪಿ ಜತೆಗಿನ ಮೈತ್ರಿಯ ಕುರಿತು ಹೆಚ್ಚಿನ ಆಸಕ್ತಿ ತೋರಿಸದೇ ಸ್ವತಂತ್ರವಾಗಿ ಸ್ಪರ್ಧಿಸುವ ಕುರಿತು ಹೆಚ್ಚಿನ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.