ಬೆಂಗಳೂರು: ನೈಜ ಘಟನೆ ಇಟ್ಟುಕೊಂಡು ಅನೇಕ ಸಿನಿಮಾಗಳು ಈಗಾಗಲೇ ಮೂಡಿಬಂದಿವೆ. ಅತ್ಯಾಚಾರಕ್ಕೆ ಒಳಗಾದ ಅನೇಕ ಮಹಿಳೆಯರ ಬಗ್ಗೆಯೂ ಸಿನಿಮಾಗಳು ಆಗಿವೆ. ಈಗ ಧರ್ಮಸ್ಥಳದಲ್ಲಿ ನಡೆದ ಘಟನೆ ಆಧರಿಸಿ ಸಿನಿಮಾ ಸಿದ್ಧವಾಗುತ್ತಿದೆ. ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಇದೇ ಪ್ರಕರಣ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.
ಧರ್ಮಸ್ಥಳದ ಚಂದ್ರಪ್ಪ ಮತ್ತು ಕುಸುಮಾತಿ ದಂಪತಿಯ 17 ವರ್ಷದ ಪುತ್ರಿ ಸೌಜನ್ಯ, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. 2012ರ ಅ.9ರಂದು ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದಾರಿ ಮಧ್ಯದ ಕಾಡಿನಲ್ಲಿ ಸೌಜನ್ಯಳ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು.
ಕಾಲೇಜು ಮುಗಿಸಿ ಮನೆಗೆ ಹಿಂತಿರುಗಿದ ಸೌಜನ್ಯ, ಬಸ್ ಇಳಿದು ತೆರಳಿದ್ದಳು. ಆದರೆ, ಮನೆಗೆ ಹೋಗಿರಲಿಲ್ಲ. ಎಲ್ಲಿ ಹೋಗಿದ್ದಾಳೆ ಎಂದು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಆದರೆ, ಮರುದಿನ ಮತ್ತೊಮ್ಮೆ ಅದೇ ದಾರಿಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಅರೆನಗ್ನ ಸ್ಥಿತಿಯಲ್ಲಿ ಸೌಜನ್ಯ ಶವ ಪತ್ತೆಯಾಗಿತ್ತು. ಶವಪತ್ತೆಯಾಗುವ ಮುನ್ನ ಮಳೆಯಾಗಿದ್ದರೂ ಆಕೆಯ ಬಟ್ಟೆಒದ್ದೆಯಾಗಿರಲಿಲ್ಲ. ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬ ದೂರು ದಾಖಲಾಗಿತ್ತು. ಕೃತ್ಯದ ಬಗ್ಗೆ ಭಾರೀ ಶಂಕೆ ವ್ಯಕ್ತವಾಗಿದ್ದರಿಂದ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ ನಡೆದು ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದು ರಾಜ್ಯ ಮತ್ತು ದೇಶದ್ಯಾದಂತ ಪ್ರತಿಭಟನೆಗೆ ಕಾರಣವಾಗಿತ್ತು.
ಪ್ರತಿಭಟನೆಗಳು ತೀವ್ರಗೊಂಡ ಕೆಲವು ದಿನಗಳ ಬಳಿಕ ಸಂತೋಷ್ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈ ಬಗ್ಗೆಯೂ ಸಾಕಷ್ಟುಅನುಮಾನಗಳು ವ್ಯಕ್ತವಾದಾಗ ನಂತರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಬಳಿಕ ತನಿಖೆಯನ್ನು ಸರ್ಕಾರವು ಸಿಬಿಐ ಹಸ್ತಾಂತರಿಸಲಾಗಿತ್ತು. 2016ರಲ್ಲಿ ತನಿಖೆ ಪೂರ್ಣಗೊಳಿಸಿದ ಸಿಬಿಐ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿತ್ತು. ಆರೋಪ ಪಟ್ಟಿಯಲ್ಲಿ ಸಿಬಿಐ, ಆರೋಪಿ ಮೇಲಿನ ಆರೋಪದ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ 2018ರಲ್ಲಿ ನ್ಯಾಯಾಲಯ ಮತ್ತೊಮ್ಮೆ ತನಿಖೆ ನಡೆಸುವಂತೆ ಸೂಚನೆ ನೀಡಿತ್ತು. ಆದರೆ, ಇದಕ್ಕೆ ತಡೆಯಾಜ್ಞೆ ಬಂದ ಕಾರಣ ತನಿಖಾ ಪ್ರಕ್ರಿಯೆ ನಡೆಸಲಾಗಲಿಲ್ಲ. ಆರೋಪಿ ಪರ ವಕೀಲರು ವಾದ ಮಂಡನೆಯನ್ನು ಮುಂದುವರಿಸಿದ್ದರು. ವಿಚಾರಣೆ ವೇಳೆಯಲ್ಲಿಯೂ ಸಿಬಿಐ ಪರ ವಕೀಲರು ಆರೋಪ ಸಾಬೀತು ಪಡಿಸುವಲ್ಲಿ ವಿಫಲವಾಗಿದ್ದರಿಂದ ಸಂತೋಷ್‌ರಾವ್‌ನನ್ನು ಆರೋಪಮುಕ್ತಗೊಳಿಸಿ ಆದೇಶಿಸಿದೆ.