ಸುರತ್ಕಲ್: “ರಾಷ್ಟ್ರಭಕ್ತ ನಾಗರಿಕ ವೇದಿಕೆಯಿಂದ 10ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಾಗೂ ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆ ಕಾರ್ಯಕ್ರಮ, ಇಡ್ಯಾ ದೇವಸ್ಥಾನದಿಂದ ಹಣತೆಯ ಮೆರವಣಿಗೆ ಹಾಗೂ ಸೈನಿಕರ ಕಾರ್ಯಕ್ರಮ ಜುಲೈ 26ರ ಸಂಜೆ ಸುರತ್ಕಲ್ ಕರ್ನಾಟಕ ಸೇವಾ ವೃಂದ ವೇದಿಕೆಯಲ್ಲಿ ನಡೆಯಲಿದೆ” ಎಂದು ಸಂಘಟನೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ವಾಯು ಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಸುಧೀರ್ ಅಮೀನ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಸುಜಿತ್ ಆಳ್ವ ಏತಮೊಗರುಗುತ್ತು ವಹಿಸಲಿದ್ದಾರೆ. ಸಂಜೆ ಗಂಟೆ 6-30ಕ್ಕೆ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಿಂದ ಹಣತೆ ಮೆರವಣಿಗೆ ನಡೆಯಲಿದ್ದು ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಐ. ರಮಾನಂದ ಭಟ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಹತ್ತನೇ ವರ್ಷಾಚರಣೆಯ ಅಂಗವಾಗಿ ಅಮರ್ ಜವಾನ್ ಜ್ಯೋತಿ ಮೆರವಣಿಗೆ ದ್ವಿಚಕ್ರ ವಾಹನ ಜಾಥಾ ಜು.23ರ ಭಾನುವಾರ ಬೆಳಗ್ಗೆ 10 ಗಂಟೆಗೆ ಹೊರಟು 11:30ಕ್ಕೆ ಕದ್ರಿಯ ಯುದ್ಧ ಸ್ಮಾರಕದಲ್ಲಿ ಸಮಾಪನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ದೇವಾಡಿಗ, ಟ್ರಸ್ಟಿಗಳಾದ ಮಹಾಬಲ ಪೂಜಾರಿ ಕಡಂಬೋಡಿ, ಭಾಸ್ಕರ್ ರೈ, ಮಹೇಶ್ ಮೂರ್ತಿ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.