Share this news

ಸುರತ್ಕಲ್: ಭಾರೀ ಪ್ರತಿಭಟನೆ, ಹೋರಾಟ ನಡೆದು ಕೊನೆಗೂ ಸುರತ್ಕಲ್ ಎನ್‌ಐಟಿಕೆ ಬಳಿಯ ಟೋಲ್‌ಗೇಟ್ ತೆರವು ಮಾಡಲಾಗಿದೆ. ಸುಂಕ ಕೊಡುವ ಕಷ್ಟ ತಪ್ಪಿತು ಎಂದು ವಾಹನ ಸವಾರರು ಖುಷಿ ಏನೋ ಪಟ್ಟರು. ಆದರೆ ಈಗ ಟೋಲ್ ಗೇಟ್ ಪರಿಸರದಲ್ಲಿ ಬಿದ್ದಿರುವ ಗುಂಡಿಗಳು ವಾಹನ ಸವಾರರ ಪಾಲಿಗೆ ಕಂಟಕವಾಗುತ್ತಿದ್ದು ಜನ ಹೈರಾಣಾಗಿದ್ದಾರೆ.


ಟೋಲ್‌ಗೇಟ್‌ನ ಎರಡೂ ಕಡೆಗಳಲ್ಲಿ ಹತ್ತಾರು ಗುಂಡಿಗಳು ನಿರ್ಮಾಣಗೊಂಡಿದ್ದು ಅದರಲ್ಲಿ ರಿಕ್ಷಾ, ಕಾರ್, ಬೈಕ್ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ. ಇಲ್ಲಿ ಈಗಾಗಲೇ ಇಬ್ಬರು ಯುವಕರು ಗುಂಡಿ ತಿಳಿಯದೆ ಬೈಕ್ ಸ್ಕಿಡ್ ಆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟು ಪ್ರಾಣ ಕಳೆದುಕೊಂಡಿದ್ದಾರೆ. ಹತ್ತಾರು ಮಂದಿ ಬೈಕ್ ಸವಾರರು ಕೈಕಾಲು ಮುರಿದುಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಸಂಬAಧಪಟ್ಟ ಇಲಾಖೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.

ಇಲ್ಲಿ ಗುಂಡಿಗಳ ಸಮಸ್ಯೆ ಒಂದೆಡೆಯಾದರೆ ಇನ್ನೊಂದೆಡೆ ಟೋಲ್ ಗೇಟ್ ಶೆಲ್ಟರ್ ಅಪಾಯಕಾರಿ ಸ್ಥಿತಿಯಲ್ಲಿದೆ. ಗಾಳಿಮಳೆಗೆ ತಗಡು ಶೀಟ್‌ಗಳು ಕೆಳಕ್ಕೆ ಬೀಳುವ ಸ್ಥಿತಿಯಲ್ಲಿದ್ದು ವಾಹನ ಸವಾರರು ಪ್ರಾಣ ಭಯದಿಂದಲೇ ಸಂಚರಿಸುತ್ತಿದ್ದಾರೆ. ಟೋಲ್‌ಗೇಟ್ ತೆಗೆಸಲು ಪ್ರತಿಭಟನೆ ಮಾಡಿದ್ದ ಸಂಘಟನೆಗಳು ಆ ಬಳಿಕ ಅಲ್ಲಿನ ಸಮಸ್ಯೆಯೇನು ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಟೋಲ್ ಗೇಟ್ ರದ್ದಾದ ಮೇಲೆ ಉಳಿದ ಶೆಲ್ಟರ್ ಮತ್ತಿತರ ಸರಕುಗಳನ್ನು ಅಲ್ಲಿಂದ ಶಿಫ್ಟ್ ಮಾಡಬೇಕಿತ್ತು. ಆದರೆ ಹಾಗೆ ಮಾಡದೇ ಅಲ್ಲಿಯೇ ಉಳಿಸಿದ್ದೇಕೆ ಎನ್ನುವ ಪ್ರಶ್ನೆ ಜನಸಾಮಾನ್ಯರದ್ದಾಗಿದೆ.

ಟೋಲ್ ಗೇಟ್ ಗುಂಡಿಯಲ್ಲಿ ಮಳೆಯ ನೀರು ನಿಂತ ಪರಿಣಾಮ ಆಳದ ಅರಿವಿಲ್ಲದೆ ಬೈಕ್ ಚಲಾಯಿಸಿದ ಪತ್ರಕರ್ತರೊಬ್ಬರು ಬಿದ್ದು ಗಾಯ ಮಾಡಿಕೊಂಡ ಘಟನೆಯೂ ನಡೆದಿದೆ. ಅವರು ಬೇರೆ ಯಾರೂ ಬೀಳುವುದು ಬೇಡ ಎಂದು ನೀರು ನಿಂತಲ್ಲಿ ಅಡ್ಡಲಾಗಿ ಕಲ್ಲನ್ನು ಇಟ್ಟು ವಾಹನ ಸವಾರರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಇಲ್ಲಿ ಹತ್ತಾರು ಅಪಘಾತಗಳು ನಡೆದಿದ್ದು ಇನ್ನಷ್ಟು ಬಲಿಯಾಗುವ ಮುನ್ನ ಸಂಬAಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ.

ವರದಿ : ಗಣೇಶ್ ಪಂಜ

Leave a Reply

Your email address will not be published. Required fields are marked *