ಬೆಳಗಾವಿ : ಚಿಕ್ಕೋಡಿ ತಾಲೂಕಿನ ಹಿರೆಕೋಡಿ ನಂದಿ ಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಹಂತಕರು ಶ್ರೀಗಳ ಬಳಿಯಿದ್ದ ಅವರ ವೈಯಕ್ತಿಕ ಡೈರಿಯನ್ನು ಸುಟ್ಟುಹಾಕಿರುವುದಾಗಿ ಪೊಲೀಸ್ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.
ಡೈರಿಯಲ್ಲಿ ಯಾವ ಮಾಹಿತಿ ಇತ್ತು. ಅದರಲ್ಲಿ ಯಾವೆಲ್ಲ ಸಂಗತಿಗಳಿದ್ದವು ಎನ್ನುವ ಕುರಿತು ಆರೋಪಿಗಳು ಮಾಹಿತಿ ನೀಡುತ್ತಿಲ್ಲ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳು ಹೇಳಿದ ಮಾಹಿತಿ ಆಧರಿಸಿ ಕೊಲೆ ಸಂಚಿನ ಪಿನ್ ಟು ಪಿನ್ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿAದ ಮಧ್ಯಾಹ್ನ 2 ಗಂಟೆಯವರೆಗೂ ತೀವ್ರ ವಿಚಾರಣೆ ನಡೆಸಿದ್ದಾರೆ. ಅಲ್ಲದೇ, ಆರೋಪಿಗಳ ಜೊತೆಗೆ ಕೊಲೆ ನಡೆದ ಸ್ಥಳ, ಸಂಚು ರೂಪಿಸಿದ ಸ್ಥಳಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.
ಚಿಕ್ಕೋಡಿ ಡಿವೈಎಸ್ಪಿ ಬಸವರಾಜ ಯಲಿಗಾರ ನೇತೃತ್ವದ ತನಿಖಾ ತಂಡದಿAದ ಆರೋಪಿಗಳಾದ ನಾರಾಯಣ ಮಾಳಿ ಮತ್ತು ಹಸನ್ ಡಲಾಯತ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೇ ಆರೋಪಿಗಳನ್ನು ಖಟಕಬಾವಿಯ ತೆರೆದ ಕೊಳವೆಬಾವಿ ಸ್ಥಳಕ್ಕೆ ಪೊಲೀಸರು ಕರೆದೊಯ್ದು ಪರಿಶೀಲನೆ ನಡೆಸಿದರು.
ಪ್ರಮುಖ ಆರೋಪಿ ನಾರಾಯಣ ಮಾಳಿ ಪೊಲೀಸ್ ತನಿಖೆಗೆ ಸಹಕರಿಸುತ್ತಿಲ್ಲ. ಪೊಲೀಸರ ದಾರಿ ತಪ್ಪಿಸುತ್ತಿದ್ದಾನೆ ಎಂಬ ಸಂಶಯ ಮೂಡುತ್ತಿದೆ. ವಿಚಾರಣೆ ವೇಳೆ ನನ್ನಿಂದ ತಪ್ಪಾಗಿದೆ ನಿಜ. ಗುಂಡಿಕ್ಕಿ ನನ್ನನ್ನು ಕೊಂದಿ ಬಿಡಿ, ಇಲ್ಲದಿದ್ದರೆ ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಶ್ರೀಗಳ ವೈಯಕ್ತಿಕ ಡೈರಿಯನ್ನು ಸುಟ್ಟಿದ್ದು ನಾನೇ. ಆದರೆ, ಅದರಲ್ಲೇನಿತ್ತು ಎಂಬುದರ ಕುರಿತು ಬಾಯಿ ಬಿಡುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.