ಕಾರ್ಕಳ : ಸಹಕಾರ ಭಾರತಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ಹೈನುಗಾರರಿಂದ ಖರೀದಿಸುವ ಹಾಲಿಗೆ ದರ ಹೆಚ್ಚಳವಾಗಬೇಕು, ಬಜೆಟ್ ನಲ್ಲಿ ಹಾಲಿನ ಪ್ರೋತ್ಸಾಹ ಧನ ಹೆಚ್ಚಳಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು, ನಂದಿನಿ ಪಶು ಆಹಾರಕ್ಕೆ ಸಬ್ಸಿಡಿ ಕೊಡಬೇಕೆಂದು ಅಂಚೆ ಕಾರ್ಡ್ ಚಳವಳಿ, ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಭೇಟಿ, ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ, ಸರಕಾರಕ್ಕೆ ಮನವಿ ಸಲ್ಲಿಕೆ ಮುಂತಾದ ಪ್ರಜಾಸತ್ತಾತ್ಮಕ ರೀತಿಯ ಹೋರಾಟವನ್ನು ಕೈಗೊಂಡಿತ್ತು. ಆದರೂ ಈವರೆಗೆ ಹೈನುಗಾರರ ನ್ಯಾಯ ಬದ್ಧ ಬೇಡಿಕೆಗೆ ಸರಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ.
ಸರಕಾರ ಹೈನುಗಾರರ ಬೇಡಿಕೆಗೆ ಸ್ಪಂದಿಸದೆ ನಿರ್ಲಕ್ಷಿಸಿದರೆ, ಆಗಸ್ಟ್ ತಿಂಗಳಿನಿAದ ರಾಜ್ಯ ವ್ಯಾಪಿ ಪ್ರತಿಭಟನೆ _ಧರಣಿ ಸತ್ಯಾಗ್ರಹಗಳನ್ನು ಸಂಘಟಿಸಿ ರಾಜ್ಯ ವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ಎಚ್ಚರಿಕೆ ನೀಡಿದ್ದಾರೆ.
ನೂತನ ಸರಕಾರ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ವಾರ ಕೆಎಂಎಫ್ ಆಡಳಿತ ಮಂಡಳಿ, ಅಧಿಕಾರಿಗಳು, ರಾಜ್ಯದ 15 ಒಕ್ಕೂಟಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಭೆ ಕರೆದು ಮೂರು ಬಾರಿ ಮುಂದೂಡಿರುವುದು ಬಹಳ ಬೇಸರದ ಸಂಗತಿ. ಸರ್ಕಾರ ಈವರೆಗೆ ಹಾಲಿನ ದರ ಏರಿಕೆ, ಹಾಲಿನ ಪ್ರೋತ್ಸಾಹ ಧನ ಬಿಡುಗಡೆ, ಹೈನುಗಾರಿಕಾ ಕ್ಷೇತ್ರದ ಸಂಕಷ್ಟಗಳ ಬಗ್ಗೆ ಯಾವುದೇ ಅಭಿಪ್ರಾಯ ಮಂಡನೆ, ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಕಳೆದ ಒಂದು ವಾರ ರಾಜ್ಯದ ಕೆಎಂಎಫ್ ಮತ್ತು 15 ಒಕ್ಕೂಟಗಳ ಪ್ರತಿನಿಧಿಗಳು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಲಕ್ಷಾಂತರ ರೂಪಾಯಿ ಖರ್ಚು_ ವೆಚ್ಚ ಮತ್ತು ಅಮೂಲ್ಯವಾದ ಸಮಯ ವ್ಯರ್ಥವಾಗಿದ್ದು ಬಿಟ್ಟರೆ ಯಾವುದೇ ಸಾಧನೆ ಆಗಿಲ್ಲ. ಕಳೆದ ಒಂದು ವಾರದಲ್ಲಿ ಕೆಎಂಎಫ್ ಒಕ್ಕೂಟ ವ್ಯಾಪ್ತಿಯ ವಿವಿಧ ಜಿಲ್ಲೆ ಮತ್ತು ತಾಲೂಕುಗಳ ನಿಯೋಜನೆಗೊಂಡ ಹಲವಾರು ಸಭೆ ಸಮಾರಂಭಗಳು ಈ ಕಾರಣದಿಂದ ಮುಂದೂಡಲ್ಪಟ್ಟು ಗ್ರಾಮೀಣ ಭಾಗದ ಹೈನುಗಾರರು ವಿನಾಕಾರಣ ತೊಂದರೆಗೊಳಗಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಪೂರ್ಣ ಬಹುಮತದ ಹೊಸ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬಜೆಟ್ ಮಂಡನೆಯಾಗಿ, ವಿಧಾನಸಭೆಯ ಅಧಿವೇಶನ ಈಗಲೂ ನಡೆಯುತ್ತಿದೆ. ಬಜೆಟ್ ನಲ್ಲಿ ಸರಕಾರ ಹೈನುಗಾರರ ಪ್ರೋತ್ಸಾಹ ಧನ ಹೆಚ್ಚಳ, ನಂದಿನಿ ಪಶು ಆಹಾರಕ್ಕೆ ಸಬ್ಸಿಡಿ ಘೋಷಣೆ ಮಾಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ ಕಳೆದ ಎಂಟು ತಿಂಗಳಿನಿAದ ಪಾವತಿಗೆ ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆಗೆ ಯಾವುದೇ ಅನುದಾನ ಮೀಸಲಿಡದೆ ಸರಕಾರ ಹೈನುಗಾರರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಈ ಬಗ್ಗೆ ರಾಜ್ಯದ ಎಲ್ಲಾ 224 ಶಾಸಕರು ಪಕ್ಷಭೇದ ಮರೆತು ಅಧಿವೇಶನದಲ್ಲಿ ರಾಜ್ಯದ ಹೈನುಗಾರರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಧ್ವನಿ ಎತ್ತಿ ಗ್ರಾಮೀಣ ಭಾಗದ ರೈತರ ನೆರವಿಗೆ ಬರಬೇಕು ಎಂದು ಎಲ್ಲಾ ಶಾಸಕರನ್ನು ಸಾಣೂರು ನರಸಿಂಹ ಕಾಮತ್ ವಿನಂತಿಸಿದ್ದಾರೆ.
ಸಹಕಾರ ಭಾರತಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಹಾಲು ಪ್ರಕೋಷ್ಟದ ರಚನೆಯಾಗುತ್ತಿದ್ದು, ರಾಜ್ಯದ ಲಕ್ಷಾಂತರ ರೈತರು ಬೀದಿಗಿಳಿದು ಪ್ರತಿಭಟಿಸಿ ಹೋರಾಟ ವಿಧಾನಸೌಧದ ಮೆಟ್ಟಿಲಿಗೆ ಬರುವುದರ ಮುಂಚಿತವಾಗಿ ಸರಕಾರ ಎಚ್ಚೆತ್ತು ಹಾಲಿಗೆ ವೈಜ್ಞಾನಿಕ ದರ ನಿಗದಿಪಡಿಸಿ ಹೈನುಗಾರಿಕೆಯಲ್ಲಿ ಆಗುತ್ತಿರುವ ನಷ್ಟವನ್ನು ಭರ್ತಿ ಮಾಡಿ ಲಾಭದಾಯಕವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.