ಬೆಂಗಳೂರು: ಹಾಲಿನ ದರ ಏರಿಕೆಗೆ ಹಾಲು ಒಕ್ಕೂಟಗಳಿಂದ ಒತ್ತಾಯ ಹಿನ್ನೆಲೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಎಲ್ಲ ಹಾಲು ಒಕ್ಕೂಟದ ನಿರ್ದೇಶಕರ ಜೊತೆ ಸಿಎಂ ಸಿದ್ಧರಾಮಯ್ಯ ಇಂದು ಸಭೆ ನಡೆಸಲಿದ್ದರೆ. ನಂದಿನಿ ಹಾಲು, ಮೊಸರು ದರ ಏರಿಕೆ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ. ಹಾಲು ಒಕ್ಕೂಟ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 5 ರೂಪಾಯಿ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಹಿನ್ನಲೆಯಲ್ಲಿ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.
ಹೈನು ರಾಸುಗಳ ನಿರ್ವಹಣಾ ವೆಚ್ಚದಲ್ಲಿ ನಿರಂತರ ಏರಿಕೆ ಆಗುತ್ತಿದೆ. ಎಲ್ಲ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಹೈನೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಪಶು ಆಹಾರ ಉತ್ಪಾದನೆಗೆ ಬಳಸುವ ಮೆಕ್ಕೆಜೋಳ, ಅಕ್ಕಿತೌಡು, ಖನಿಜ ಪದಾರ್ಥಗಳ ಬೆಲೆ ಹೆಚ್ಚಳ, ಹತ್ತಿಕಾಳು ಹಿಂಡಿ ಸೇರಿದಂತೆ ಇತರೆ ಪಶು ಅಹಾರದಲ್ಲಿ ಶೇ.30ಕ್ಕಿಂತಲೂ ಅಧಿಕ ಏರಿಕೆಯಾಗಿದೆ. ವಿದ್ಯುತ್ ದರ ಹೆಚ್ಚಳ, ಪ್ರತಿ ಕೆಜಿ ಪಶು ಆಹಾರ ಉತ್ಪಾದನೆಯ ವೆಚ್ಚ ಎರಡು ವರ್ಷದ ಹಿಂದೆ 18 ರು. ಇತ್ತು. ಈಗ 25 ರು.ಗಳಿಗೆ ತಲುಪಿದೆ. ಹೀಗಾಗಿ ಪ್ರತಿ ಲೀಟರ ಹಾಲಿನ ಬೆಲೆಯನ್ನು ತಲಾ 5 ರು.ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಹಾಲು ಉತ್ಪಾದಕರು ಹಾಗೂ ಉದ್ಯಮದ ಅಭಿವೃದ್ಧಿಗೆ ತೊಂದರೆಯಾಗಲಿದೆ ಎಂದು ಸಭೆಯಲ್ಲಿ ಹಾಲು ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
ಈ ಹಿಂದಿನ ಸರ್ಕಾರದ ಅವಧಿಯಲ್ಲೇ ಕೆಎಂಎಫ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ರಾಜ್ಯದ 14 ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲಿಗೆ ತಲಾ 5 ರು.ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ಕೆಎಂಎಫ್ ಪ್ರಸ್ತಾವಬೆಗೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಡೆ ನೀಡಿದ್ದರು. ನಂತರ 2022 ನವೆಂಬರ್ 22ರಂದು ಕೆಎಂಎಫ್ ಹಾಲು ಮತ್ತು ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರು. ಹೆಚ್ಚಳ ಮಾಡಿತ್ತು.