Share this news

ಕಾರ್ಕಳ:ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು,ವಸತಿ ಮುಂತಾದ ಯೋಜನೆಗಳಿಗೆ ಒಂದು ನಯಾಪೈಸೆ ಅನುದಾನವನ್ನೇ ನೀಡದೇ, ಕೇವಲ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಣೆಯಾಗಲು ಸಾಧ್ಯವಿಲ್ಲ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವಾಗಬೇಕಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸುನಿಲ್ ಕುಮಾರ್ ಪರೋಕ್ಷವಾಗಿ ರಾಜ್ಯ ಸರ್ಕಾರವನ್ನು ಕುಟುಕಿದರು.
ಅವರು ಅಜೆಕಾರು ರಾಮ ಮಂದಿರದಲ್ಲಿ ಗುರುವಾರ ನಡೆದ ಅಜೆಕಾರು ಹೋಬಳಿಮಟ್ಟದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಕಳೆದ ಒಂದು ವರ್ಷದಿಂದ ಸರ್ಕಾರ ರಾಜ್ಯದ ಅಭಿವೃದ್ದಿ ಯೋಜನೆಗಳಿಗೆ ಅನುದಾನವನ್ನೇ ನೀಡಿಲ್ಲ,ಇದರಿಂದ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಇದೇವೇಳೆ ಮಾತನಾಡಿದ ಅವರು, ಸರ್ಕಾರದ ಯೋಜನೆಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ಅಧಿಕಾರಿಗಳದ್ದು. ಅರ್ಹತೆಯಿದ್ದು ಈ ಯೋಜನೆಯಿಂದ ಹೊರಗುಳಿದವರನ್ನು ಸೇರ್ಪಡೆಗೊಳಿಸಬೇಕು. ಜನರ ಜೀವನಮಟ್ಟ ಸುಧಾರಿಸುವ ಹಾಗೂ ಸ್ವಾವಲಂಬಿ ಜೀವನಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೊಳಿವೆ. ಕೇಂದ್ರ ಸರ್ಕಾರದ ನೇರ ನಗದು ಜಮಾವಣೆಯಿಂದ ಕೋಟ್ಯಾಂತರ ಫಲಾನುಭವಿಗಳು ಮಧ್ಯವರ್ತಿಗಳ ಹಾವಳಿಯಿಂದ ಮುಕ್ತರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮರ್ಣೆ ಗ್ರಾ.ಪಂ ಅಧ್ಯಕ್ಷೆ ಪ್ರಭಾವತಿ ನಾಯಕ್,ಉಪಾಧ್ಯಕ್ಷೆ ಮೇರಿ ಮಸ್ಕರೇನ್ಹಸ್, ಮಾಳ ಗ್ರಾ.ಪಂ ಉಮೇಶ್ ಪೂಜಾರಿ, ಕಾರ್ಕಳ ತಾ.ಪಂ ಇ.ಒ ಗುರುಶಾಂತಪ್ಪ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಉಪ ತಹಶೀಲ್ದಾರ್ ನಮಿತಾ, ಕಂದಾಯ ನಿರೀಕ್ಷಕ ರಿಯಾಜ್ ಅಹಮ್ಮದ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಶ್ರೀಮತಿ, ಮರ್ಣೆ ಪಂಚಾಯಿತಿ ಪಿಡಿಓ ತಿಲಕ್ ರಾಜ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಕಳ ತಾಲೂಕು ತಹಶೀಲ್ದಾರ್ ನರಸಪ್ಪ ತಹಸೀಲ್ದಾರ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಗ್ಯಾರಂಟಿ ಸಮಾವೇಶಕ್ಕೆ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯರೇ ಗೈರು!

ರಾಜ್ಯ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಅಜೆಕಾರಿನಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಯೋಜನೆಯ ಕುರಿತು ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಬಹುತೇಕ ಸದಸ್ಯರೇ ಗೈರು ಹಾಜರಾಗಿರುವ ವಿಚಾರ ತೀವೃ ಕುತೂಹಲಕ್ಕೆ ಕಾರಣವಾಗಿದೆ.

 

             

Leave a Reply

Your email address will not be published. Required fields are marked *