ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ “ಸಂವಿಧಾನ ಪೀಠಿಕೆಯ ಓದು” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಮಾಡುತ್ತಿದ್ದೇವೆ. ವಿಶ್ವದ ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ದಿನ ಆಚರಣೆ ಮಾಡುತ್ತಿದ್ದಾರೆ. ಸಿಂಧೂ ನಾಗರಿಕತೆ ಕಾಲದಿಂದಲೂ ಪ್ರಜಾಪ್ರಭುತ್ವದ ವ್ಯವಸ್ಥೆ ಇತ್ತು. ಬುದ್ಧ, ಬಸವಣ್ಣ ಅವಧಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿ ಇತ್ತು. ಹಿಂದೆ ಗಣತಂತ್ರ ಎಂದು ಕರೆಯಲಾಗುತ್ತಿತ್ತು. ಜಗತ್ತಿನ ಅನೇಕ ರಾಷ್ಟ್ರಗಳು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದೆ. ಸಂವಿಧಾನ ರಚನೆ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆ ಅಧಿಕೃತವಾಗಿ ಜಾರಿಯಾಗಿದೆ. ಮಕ್ಕಳು ಸೇರಿದಂತೆ ಎಲ್ಲರೂ ಸಂವಿಧಾನದ ಪೀಠಿಕೆ ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವ, ಸಂವಿಧಾನ ಉಳಿದರೆ ನಾವೆಲ್ಲರೂ ಉಳಿದ ಹಾಗೆ. ಮಕ್ಕಳಿಗೂ ಸಹ ಸಂವಿಧಾನದ ಅರಿವು ಇರಬೇಕು. ಶಾಲಾ-ಕಾಲೇಜುಗಳಲ್ಲೂ ಸಂವಿಧಾನದ ಬಗ್ಗೆ ತಿಳಿಸಿಕೊಡಬೇಕು. ಸಂವಿಧಾನ ವಿರೋಧ ಮಾಡುವವರ ಬಗ್ಗೆ ಜಾಗೃತರಾಗಿ ಇರಬೇಕು ಎಂದರು.
ಜಾಗತಿಕ ವಾಚಕರ ಸರ್ವ ಜನರ ಏಕ ಧ್ವನಿ ಶೀರ್ಷಿಕೆಯಡಿ ಕಾರ್ಯಕ್ರಮ ನಡೆಯುತ್ತಿದ್ದು ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಹೆಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಕೆ.ಹೆಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಶಿವರಾಜ್ ತಂಗಡಗಿ, ನಾಗೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.




