ಕೇರಳ: ಮನೆಯ ಅಕ್ವೇರಿಯಂನಲ್ಲಿದ್ದ ಮುದ್ದಿನ ಮೀನು ಸತ್ತಿತು ಎನ್ನುವ ಕಾರಣಕ್ಕೆ ಬಾಲಕನೊಬ್ಬ ನೇಣಿಗೆ ಶರಣಾಗಿರುವ ದುರಂತ ಘಟನೆ ಕೇರಳದ ಮಲಪ್ಪುರಂನ ಪೊನ್ನಾನಿಯ ಚಂಗರಂಕುಲಂನಲ್ಲಿ ನಡೆದಿದೆ.
13 ವರ್ಷದ ರೋಷನ್ ಮೆನನ್ ಆತ್ಮಹತ್ಯೆಗೆ ಶರಣಾದ ಬಾಲಕ. ರೋಷನ್ ತನ್ನ ಮನೆಯ ಅಕ್ವೇರಿಯಂನಲ್ಲಿದ್ದ ಮುದ್ದಿನ ಮೀನು ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದಕ್ಕೆ ತುಂಬಾ ಬೇಸರ ಮಾಡಿಕೊಂಡಿದ್ದ. ಇದೇ ಕಾರಣಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ರವೀಂದ್ರನ್ ಅವರ ಪುತ್ರ ರೋಷನ್ ಮೆನನ್ ಶುಕ್ರವಾರ ಬೆಳಿಗ್ಗೆ ತಮ್ಮ ಮನೆಯ ಪಾರಿವಾಳಗಳಿಗೆ ಆಹಾರ ನೀಡಲು ಮನೆಯ ಟೆರೇಸ್ ಮೇಲೆ ಹೋಗಿದ್ದಾನೆ. ಒಂದು ಗಂಟೆ ಕಳೆದರೂ ರೋಷನ್ ಕೆಳಗೆ ಬಾರಲೇ ಇಲ್ಲ. ಹೀಗಾಗಿ, ಟೆರೇಸ್ ಮೇಲೆ ಹೋಗಿ ನೋಡಿದಾಗ ಟೆರೇಸ್‌ನಲ್ಲಿ ನಿರ್ಮಿಸಲಾದ ಶೆಡ್‌ನಲ್ಲಿ ರೋಷನ್ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಕೂಡಲೇ ಅವನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವನು ಆ ವೇಳೆಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.