ಕಾರ್ಕಳ : ಕಾರ್ಕಳ ತಾಲೂಕಿನ ನೀರೆ ಗ್ರಾಮದ ಪಾಲ್ದಟ್ಟ ಎಂಬಲ್ಲಿ ಕಳೆದ 5 ದಿನಗಳ ಹಿಂದೆ ತೆರೆದ ಬಾವಿಗೆ ಬಿದ್ದ 2 ಶ್ವಾನಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ನೀರೆ ಗ್ರಾಮದ ಪಾಲ್ದಟ್ಟ ಬೇಬಿ ಶೆಟ್ಟಿ ಎಂಬವರ ಮನೆಯ ಬಾವಿಯಲ್ಲಿ 5 ದಿನಗಳಿಂದ 2 ಶ್ವಾನಗಳು ಬಿದ್ದಿದ್ದು, ಅವುಗಳನ್ನು ಸ್ಥಳೀಯ ಕೆಲವು ನಿವಾಸಿಗಳು ನೋಡಿದ್ದರೂ ರಕ್ಷಣೆಗೆ ಮುಂದಾಗಿರಲಿಲ್ಲ.ಅಕ್ಕಪಕ್ಕದ ಮನೆಯ 2 ನಾಯಿಗಳು ಪರಸ್ಪರ ಕಚ್ಚಾಡಿಕೊಂಡು ಬಾವಿಗೆ ಬಿದ್ದಿದ್ದು ಈ ವಿಚಾರ ಮನೆಯವರಿಗೆ ತಿಳಿದಿದ್ದರೂ ಶ್ವಾನಗಳನ್ನು ಮೇಲೆತ್ತಲು ಯಾರೂ ಕೂಡ ಸಹಕಾರ ನೀಡಿರಲಿಲ್ಲ.
ಬಾವಿಗೆ ಬಿದ್ದ ಶ್ವಾನಗಳು ಅನ್ನಾಹಾರವಿಲ್ಲದೆ 5 ದಿನಗಳಿಂದ ನಿತ್ರಾಣವಾಗಿರುವುದನ್ನು ಕಂಡ ಸ್ಥಳೀಯ ನಿವಾಸಿ ವಾಸುದೇವ ಶೆಟ್ಟಿಗಾರ್ ಅವರು ತಕ್ಷಣವೇ ಕಾರ್ಕಳ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಬಾವಿಗೆ ಬಿದ್ದಿರುವ ಶ್ವಾನಗಳನ್ನು ರಕ್ಷಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸುಮಾರು 1 ಗಂಟೆ ಕಾರ್ಯಚಾರಣೆ ನಡೆಸಿ ಶ್ವಾನಗಳನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಮೂಕಪ್ರಾಣಿಗಳ ರಕ್ಷಣೆ ಮಾಡಿರುವ ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಗ್ನಿಶಾಮಕ ದಳ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್, ಉದಯ ಕುಮಾರ್, ಜಯ ಮೂಲ್ಯ, ಸುರೇಶ್ ಕುಮಾರ್, ಉಮೇಶ್ ಹಾಗೂ ಮಹಮ್ಮದ್ ರಫೀಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.