ಕಾರ್ಕಳ: ಮರ್ಣೆ ಗ್ರಾಮದ ಅಜೆಕಾರು ಸಮೀಪದ ಕೈಕಂಬ ಎಂಬಲ್ಲಿ ಆವರಣವಿಲ್ಲದ ಬಾವಿ ಬಿದ್ದ ವ್ಯಕ್ತಿಯನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಅಜೆಕಾರು ಕೈಕಂಬ ನಿವಾಸಿ ಸುಕುಮಾರ್(40) ಎಂಬವರು ಭಾನುವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಮೂತ್ರವಿಸರ್ಜನೆಗೆಂದು ಮನೆಯಿಂದ ಹೊರಬಂದವರು ನಿದ್ದೆಗಣ್ಣಿನಲ್ಲಿ ಮನೆ ಸಮೀಪದ ಆವರಣವಿಲ್ಲದ ಬಾವಿಗೆ ಆಯತಪ್ಪಿಬಿದ್ದಿದ್ದರು. ಬಾವಿಬಿದ್ದ ಬಳಿಕ ರಕ್ಷಣೆಗಾಗಿ ಕೂಗಿಕೊಂಡಾಗ ಮನೆಮಂದಿ ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬಾವಿಗೆ ಬಿದ್ದಿದ್ದ ಸುಕುಮಾರ್ ಅವರನ್ನು ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಬಾವಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇದ್ದ ಹಿನ್ನಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಬಿ ಎಂ ಸಂಜೀವ್,ದಫೇದಾರ್ ಅಚ್ಚುತ, ಸಿಬ್ಬಂದಿಗಳಾದ ಚಂದ್ರಶೇಖರ್, ,ನಿತ್ಯಾನಂದ, ಸುಜಯ್, ಉಮೇಶ್, ವಿನಾಯಕ,ಸಂಜಯ್ ಪಾಲ್ಗೊಂಡಿದ್ದರು