ಅಜೆಕಾರು:ಭಗವಂತನ ಕರುಣಾಮಯಿ, ತನ್ನ ಸನ್ನಿಧಾನದಲ್ಲಿ ಭಕ್ತಾದಿಗಳು ನಿಷ್ಕಲ್ಮಶ ಮನಸ್ಸಿನಲ್ಲಿ, ಸಮರ್ಪಣಾಭಾವದಿಂದ ಭಗವಂತನನ್ನು ಪ್ರಾರ್ಥಿಸಿದಲ್ಲಿ ಉತ್ತಮ ಪ್ರತಿಫಲ ಅನುಗ್ರಹವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಪಾದರು ಹೇಳಿದರು.
ಅವರು ಏಪ್ರಿಲ್ 17ರಂದು ಸೋಮವಾರ ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ನೂತನ ರಥ ಸಮರ್ಪಣಾ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.ದೇವಸ್ಥಾನಗಳಲ್ಲಿ ನಡೆಯುವ ಉತ್ಸಾವಧಿಗಳಲ್ಲಿ ಗ್ರಾಮದ ಭಕ್ತಾದಿಗಳು ಪಾಲ್ಗೊಳ್ಳುವುದರಿಂದ ಗ್ರಾಮಕ್ಕೆ ಬರುವ ದುರಿತಗಳೆಲ್ಲವೂ ಭಗವಂತನ ಕೃಪೆಯಿಂದ ನಿವಾರಣೆಯಾಗುತ್ತವೆ ಎಂದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಸ್ಯ ಶಿವರಾಮ.ಜಿ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ,ರಥ ಸಮರ್ಪಣೆ ಕಾರ್ಯಕ್ರಮವು ಅತ್ಯಂತ ಸಂಭ್ರಮದಿಂದ ಜರುಗಿದೆ,ಗ್ರಾಮಸ್ಥರ ಪೂರ್ಣ ಸಹಕಾರ ಹಾಗೂ ದೇವರ ಅನುಗ್ರಹದಿಂದ ಇದು ಸಾಧ್ಯವಾಗಿದೆ ಎಂದರು. ರಥ ನಿರ್ಮಾಣದ ಪುಣ್ಯಕಾರ್ಯಕ್ಕೆ ಪ್ರತಿಯೊಬ್ಬ ಭಕ್ತರ ಧನ ವಿನಿಯೋಗವಾಗಿದೆ.ಶ್ರೀವಿಷ್ಣುಮೂರ್ತಿ ದೇವರು ಎಲ್ಲರಿಗೂ ಒಳಿತನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ. ವೆಂಕಟರಮಣ ಭಟ್,ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಮುಂಬಯಿ ಉದ್ಯಮಿ ಸಾಧು.ಟಿ ಶೆಟ್ಟಿ,ವ್ಯವಸ್ಥಾಪನ ಸಮಿತಿ ಕೋಶಾಧಿಕಾರಿ ಜಯಕರ ಶೆಟ್ಟಿ,ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ ಭಾಸ್ಕರ ಶೆಟ್ಟಿ,ವಿಜಯ ಶೆಟ್ಟಿ,ರಂಗನಾಥ ಭಟ್,ಸುಜಯ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಥ ನಿರ್ಮಾಣ ಮಾಡಿದ ಪದ್ಮನಾಭ ಆಚಾರ್ಯ ಅವರನ್ನು ದೇವಸ್ಥಾನದ ವತಿಯಿಂದ ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು.ರಥ ನಿರ್ಮಾಣಕ್ಕೆ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಹರೀಶ್ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಶೆಟ್ಟಿ ವಂದಿಸಿದರು.