Share this news

ಕಾರ್ಕಳ : ಹಿಂದಿನ ಸಾಲಿನಲ್ಲಿ ಕಾರ್ಕಳ ತಾಲೂಕಿನ ಕೆಲವು ತೋಟಗಳಲ್ಲಿ ಕಂಡು ಬಂದಿದ್ದ ಅಡಿಕೆ ಎಲೆ ಚುಕ್ಕೆ ರೋಗವು ಈ ಸಾಲಿನಲ್ಲಿ ಮರುಕಳಿಸುತ್ತಿದ್ದು ಗಂಭೀರ ಸ್ವರೂಪನ್ನು ಪಡೆಯುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದ್ದು, ರೈತರು ತಕ್ಷಣ ಮುಂಜಾಗ್ರತೆ ವಹಿಸಿ ನಿರ್ವಹಣಾ ಕ್ರಮಗಳನ್ನು ಅನುಸರಿಸಿಕೊಳ್ಳಬೇಕಾದ್ದು ಅನಿವಾರ್ಯವಾಗಿರುತ್ತದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ರೋಗವು ತೀವ್ರಗತಿಯಲ್ಲಿ ಹರಡುತ್ತಿದ್ದು ಹೆಚ್ಚಿನ ಭಾದೆ ಉಂಟು ಮಾಡಿ, ಅಡಿಕೆ ಬೆಳೆ ಫಸಲು ನಾಶ ಹಾಗೂ ಮರಗಳ ನಾಶಕ್ಕೂ ಕಾರಣವಾಗಬಹುದಾಗಿದೆ.

ಗಾಳಿ ಮುಖೇನ ಹರಡುವ ಕಾರಣ, ಪ್ರಾಥಮಿಕ ಹಂತದಲ್ಲೇ ನಿಯಂತ್ರಣ ಮಾಡದಿದ್ದರೆ ಈ ರೋಗವನ್ನು ನಿಯಂತ್ರಿಸುವುದು ಕಷ್ಟ. 1964ರಲ್ಲಿ ಪ್ರಥಮವಾಗಿ ಅಡಿಕೆ ಬೆಳೆಯಲ್ಲಿ ಕಂಡು ಬಂದು ಅಡಿಕೆ ಬೆಳೆಗೆ ಯಾವುದೇ ರೀತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಹಾನಿ ಮಾಡದೇ ಅಡಿಕೆ ಬೆಳೆಗಾರರಿಗೆ ದೊಡ್ಡ ತೊಂದರೆಯಾಗಿ ಪರಿಗಣಿಸಲ್ಪಟ್ಟಿರಲಿಲ್ಲ. ಆದರೆ ಕಳೆದೆರೆಡು ವರ್ಷಗಳಿಂದ ಈ ರೋಗವು ತೀವ್ರ ಗತಿಯಲ್ಲಿ ಹರಡಿ ಹೆಚ್ಚಿನ ಭಾದೆ ಉಂಟು ಮಾಡುತ್ತಿದ್ದು ರೈತರಲ್ಲಿ ಆತಂಕ ಮೂಡಿಸಿದೆ.

ಈ ರೋಗವು ಕಡಿಮೆ ಉಷ್ಣಾಂಶ ಹಾಗೂ ಹೆಚ್ಚಿನ ಆರ್ದ್ರತೆಯಲ್ಲಿ ತೀವ್ರ ಗತಿಯಲ್ಲಿ ಹರಡುತ್ತಿದ್ದು, ಈ ಭಾದೆಯು ಕೊಲ್ಲೆಟೋಟ್ರೈಕಂ ಪೆಸ್ಟಾಲೋಷಿಯಾ ಹಾಗೂ ಫಿಲ್ಲೋಸ್ಟಿಕಾ ಎಂಬ ಶೀಲಿಂಧ್ರಗಳಿAದ ಉಂಟಾಗುತ್ತದೆ. ಆದರೆ, ಇತ್ತೀಚಿಗೆ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗಕ್ಕೆ ಕೊಲ್ಲೆಟೋಟ್ರೈಕಂ ಕಹಾವೆ ಸಬ್ ಸ್ಪೀಸಿಸ್ ಸಿಗ್ಗಾರೋ ಎನ್ನುವ ಶಿಲೀಂಧ್ರವು ಕಾರಣವೆಂದು ತಿಳಿದು ಬಂದಿದೆ. ಎಲೆಚುಕ್ಕೆ ರೋಗದಿಂದ ಪತ್ರಹರಿತ್ತು ಕಡಿಮೆಯಾಗಿ ಇಳುವರಿ ಕುಂಠಿತವಾಗುತ್ತದೆ. ಇದು ಮರಗಳ ಬೆಳವಣಿಗೆ ಹಾಗೂ ಉತ್ಪಾದನಾ ಸಾಮರ್ಥ್ಯದ ಮೇಲೆ ದೀರ್ಘಕಾಲಿಕ ದುಷ್ಪರಿಣಾಮ ಬೀರಬಹುದು.

ರೋಗ ಲಕ್ಷಣಗಳು:
ಅಡಿಕೆ ಸೋಗೆಯಲ್ಲಿ ಹಳದಿ ಬಣ್ಣದ ಅಂಚುಗಳಿರುವ ಕಂದು ಚುಕ್ಕೆ ಹಾಗೂ ಕಪ್ಪು ಬಣ್ಣದ ಅಂಚುಗಳಿರುವ ಬೂದು ಬಣ್ಣದ ಚುಕ್ಕೆಗಳು ಕಂಡು ಬರುತ್ತವೆ. ಸೋಗೆಗಳಲ್ಲಿ ಚುಕ್ಕೆಗಳು ಹೆಚ್ಚಾದಂತೆ ಒಂದಕ್ಕೊAದು ಕೂಡಿಕೊಂಡು ಒಣಗಿದ ಸೋಗೆಗಳು ಜೋತು ಬಿದ್ದು ಸುಟ್ಟಂತೆ ಕಾಣುತ್ತವೆ. ಮೊದಲು ಕೆಳಭಾಗದ ಒಂದೆರೆಡು ಎಲೆಗಳಲ್ಲಿ ರೋಗಲಕ್ಷಣ ಕಾಣಿಸಿಕೊಂಡು, ಮೇಲಿನ ಎಲೆಗಳಿಗೂ ಹಬ್ಬುತ್ತದೆ. ಈ ರೋಗದ ಚಿಹ್ನೆಗಳು ಇತ್ತೀಚಿನ ದಿನಗಳಲ್ಲಿ ಎಲೆಗಳ ಮೇಲೆ ಮಾತ್ರವಲ್ಲದೆ ಅಡಿಕೆ ಹಾಳೆ ಹಾಗೂ ಕಾಯಿಗಳ ಮೇಲು ಕಂಡು ಬರುತ್ತಿವೆ. ರೋಗಬಾಧಿತ ಕಾಯಿಗಳು ಬಲಿಯುವ ಮೊದಲೇ ಹಳದಿಯಾಗಿ ಉದುರುತ್ತವೆ. ಕೆಲವೊಮ್ಮೆ, ಕಾಯಿಯ ಮೇಲೆ ಚುಕ್ಕೆ ಮೂಡಿದ ಜಾಗವು ಸೀಳಿ ಕಾಯಿಗಳು ಉದುರುತ್ತವೆ. ಈ ರೋಗವು ತೋಟದಿಂದ ತೋಟಕ್ಕೆ ಅತೀ ವೇಗವಾಗಿ ಗಾಳಿಯ ಮುಖೇನ ಹರಡುತ್ತದೆ. ಇದರ ನಿಯಂತ್ರಣವನ್ನು ರೈತರು ಸಮುದಾಯ ಮಟ್ಟದಲ್ಲಿ (ಸಾಮೂಹಿಕವಾಗಿ) ಮಾಡಿದಲ್ಲಿ ಉತ್ತಮ ನಿಯಂತ್ರಣ ಸಾಧ್ಯ.

ನಿಯಂತ್ರಣ ಕ್ರಮಗಳು:
1. ಹೆಚ್ಚು ಭಾದಿತ ಎಲೆಗಳನ್ನು ಕತ್ತರಿಸಿ ಸುಡುವುದರಿಂದ ಸೋಂಕಿನ ತೀವ್ರತೆಯನ್ನು ಕಡಿಮೆಗೊಳಿಸಬಹುದು ಈ ಕೆಲಸ ಪ್ರಾಯೋಗಿಕವಾಗಿ ಕಷ್ಟಸಾಧ್ಯವಾದರೂ ತೀವ್ರ ಬಾಧೆಯಿರುವೆಡೆ ಅತ್ಯವಶ್ಯವಾಗಿರುತ್ತದೆ.
2. ಮುಂಜಾಗ್ರತಾ ಕ್ರಮವಾಗಿ ಅಡಿಕೆ ಗೊನೆಗಳಿಗೆ ಮೈಲುತುತ್ತು/ಬೋರ್ಡೋ ಮಿಶ್ರಣ ಸಿಂಪಡಿಸುವಾಗ ಎಲೆಗಳಿಗೂ ಕಡ್ಡಾಯವಾಗಿ ಸಿಂಪಡಣೆ ಮಾಡಬೇಕು.
3. ಹೆಚ್ಚು ರೋಗಬಾಧೆಯಿರುವ ತೋಟಗಳಲ್ಲಿ, ಮಳೆಯಿಲ್ಲದ ಶುಷ್ಕವಾದ ವಾತಾವರಣದಲ್ಲಿ ಪ್ರೊಪಿಕೊನಝೋಲ್ (Propiconazole 25EC) ಅಥವಾ ಟೆಬುಕೊನಝೋಲ್ (Tebuconazole 38.9Sc) ಅಥವಾ ಹೆಕ್ಸಾಕೊನಝೋಲ್ (Hexaconazole 5EC / 5SC) ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿ. ಲೀ. ಪ್ರಮಾಣದಲ್ಲಿ ಮರಗಳಿಗೆ ಸಿಂಪಡಿಸಬೇಕು. ಮೂರರಿಂದ ನಾಲ್ಕು ವಾರಗಳ ನಂತರ, ಪ್ರೋಪಿನೆಬ್ 70WP ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಎರಡು ಗ್ರಾಂ ಪ್ರಮಾಣದಲ್ಲಿ ಸಿಂಪಡಿಸಬೇಕು. ಶಿಲೀಂಧ್ರನಾಶಕ ದ್ರಾವಣ ತಯಾರಿಸುವಾಗ ಪ್ರತೀ ಲೀಟರ್ ದ್ರಾವಣಕ್ಕೆ ಒಂದು ಮಿ. ಲೀ. ಪ್ರಮಾಣದಲ್ಲಿ ಅಂಟನ್ನು ಸೇರಿಸಬೇಕು. ಶಿಲೀಂಧ್ರನಾಶಕ ಸಿಂಪಡಣೆಯ ನಂತರ ಕನಿಷ್ಟ 2-3 ತಾಸುಗಳು ಮಳೆ ಇರದೇ ಬಿಸಿಲಿನ ವಾತಾವರಣವಿರುವುದು ಅವಶ್ಯ.ಶ
4. ಪೋಷಕಾಂಶ ನಿರ್ವಹಣೆ: ಈ ರೋಗವು ಪ್ರಮುಖವಾಗಿ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಸಾರಜನಕಯುಕ್ತ ಸಾವಯವ ಹಾಗೂ ರಾಸಾಯನಿಕ ಗೊಬ್ಬರ ನೀಡುವ ಹಾಗೂ ಅಗತ್ಯ ಪ್ರಮಾಣದಲ್ಲಿ ಪೊಟಾಷ್ ಪೋಷಕಾಂಶ ನೀಡದ ತೋಟಗಳಲ್ಲಿ ಹೆಚ್ಚು ಕಂಡು ಬರುತ್ತಿದ್ದು, ಮಣ್ಣು ಪರೀಕ್ಷೆ ಹಾಗೂ ವಯಸ್ಸಿನ ಆಧಾರದಲ್ಲಿ ಸೂಕ್ತ ಪೋಷಕಾಂಶಗಳನ್ನು ನೀಡುವುದು ಪ್ರಮುಖವಾಗಿ ಪೊಟಾಷ್ ನೀಡಿಕೆ ಅತೀ ಮುಖ್ಯವಾಗಿದೆ. ಹುಳಿ ಮಣ್ಣನ್ನು ಸಮತೋಲನಗೊಳಿಸಲು ಕೃಷಿ ಸುಣ್ಣವನ್ನು 250 ಗ್ರಾಂಗಳಷ್ಟು ಪ್ರತಿ ಮರಕ್ಕೆ ನೀಡುವುದು. ಸುಣ್ಣ ನೀಡಿದ ಮೂರರಿಂದ ನಾಲ್ಕು ವಾರಗಳ ನಂತರ ಸಾಮಾನ್ಯವಾಗಿ ಪ್ರತಿ ಅಡಿಕೆ ಮರಕ್ಕೆ 12 ಕಿಲೋ ಗ್ರಾಂನಷ್ಟು ಹಟ್ಟಿಗೊಬ್ಬರ ಮತ್ತು ಹಸಿರೆಲೆ ಗೊಬ್ಬರ, ಯೂರಿಯ (220 ಗ್ರಾಂ), ರಾಕ್ ಫಾಸ್ಪೇಟ್ (200 ಗ್ರಾಂ) ಮತ್ತು ಪೊಟಾಷ್ (240-350 ಗ್ರಾಂ) ನೀಡಬೇಕು. ರಸಗೊಬ್ಬರಗಳನ್ನು ಎರಡು ಕಂತುಗಳಲ್ಲಿ ಅಗಸ್ಟ-ಸೆಪ್ಟೆಂಬರ್ ಹಾಗೂ ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ನೀಡುವುದು ಒಳಿತು. ಜೊತೆಗೆ ಲಘುಪೋಷಕಾಂಶಗಳಾದ ಸತುವಿನ ಸಲ್ಫೇಟ್ (5 ಗ್ರಾಂ) ಮತ್ತು ಬೊರಾಕ್ಸ (5 ಗ್ರಾಂ) ಕೂಡ ನೀಡಬಹುದು.
5. ಬಸಿ ಕಾಲುವೆಗಳನ್ನು ಸ್ವಚ್ಛಗೊಳಿಸಿ ತೋಟಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
6. ರೋಗ ಪೀಡಿತ ಪ್ರದೇಶಗಳಿಂದ ಅಡಿಕೆ ಸಸಿಗಳನ್ನು ರೋಗವಿಲ್ಲದ ಪ್ರದೇಶಕ್ಕೆ ಸಾಗಿಸಕೂಡದು.
7. ಗಾಳಿಯಲ್ಲಿ ರೋಗಾಣು ಬಹಳ ಬೇಗನೆ ಹರಡುವುದರಿಂದ ಸಮುದಾಯ ಮಟ್ಟದ ರೋಗ ನಿಯಂತ್ರಣಾ ಕ್ರಮಗಳು ಬಲು ಮುಖ್ಯವಾಗಿರುತ್ತವೆ.
8. ತೀವ್ರ ರೋಗಬಾಧೆ ಇರುವಲ್ಲಿ, ಇದೇ ಶಿಲೀಂಧ್ರದಿಂದ ಉಂಟಾಗುವ ಸಿಂಗಾರ ಒಣಗುವ ರೋಗಕ್ಕೆ ಜನವರಿ ತಿಂಗಳ ನಂತರ ಪ್ರೊಪಿಕೊನಝೋಲ್ ಸಿಂಪಡಿಸುವಾಗ ಎಲೆಚುಕ್ಕೆ ರೋಗವಿರುವ ಮರಗಳ ಎಲೆಗಳಿಗೂ ಸಿಂಪಡಿಸಬಹುದು

ಮಾಹಿತಿ: ತೋಟಗಾರಿಕಾ ಇಲಾಖೆ

Leave a Reply

Your email address will not be published. Required fields are marked *