ಬೆಂಗಳೂರು: ರಾಜಕಾರಣದ ಕುಟುಂಬದಿಂದಲೇ ಬಂದಿರುವ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಇಂದು(ಏಪ್ರಿಲ್ 28) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಸೇರಿದರು.
ಡಿಕೆ ಶಿವಕುಮಾರ್ ಅವರು ಗೀತಾ ಶಿವರಾಜ್ ಕುಮಾರ್ ಅವರಿಗೆ ಕಾಂಗ್ರೆಸ್ ಚಿಹ್ನೆಯ ಶಾಲು ಹಾಕಿ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಇದರೊಂದಿಗೆ ದೊಡ್ಮನೆ ಸೊಸೆ ಗೀತಾ ಅವರು ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಈಗಾಗಲೇ ನಟ ಶಿವರಾಜ್ ಕುಮಾರ್ ಸಹ ಗೀತಾ ಜೊತೆ ಪ್ರಚಾರಕ್ಕೆ ಹೋಗುವುದಾಗಿ ಹೇಳಿದ್ದಾರೆ. ಇದರಿಂದ ಕಾಂಗ್ರೆಸ್ಗೆ ತಾರಾಬಲ ಬಂದಂತಾಗಿದೆ.
ಸುಮಾರು ಗಾಳ ಹಾಕಿ ಹಾಕಿ ಸುಸ್ತಾಗಿದ್ದೆ. ಕೊನೆಗೆ ನಮ್ಮ ಗಾಳಕ್ಕೆ ಮಧು ಬಂಗಾರಪ್ಪ ಬಿದ್ದರು. ಇದೀಗ ಗೀತಾ ಶಿವರಾಜ್ ಕುಮಾರ್ ದೊಡ್ಡ ಬಲೆ ಬಿದ್ದಿದ್ದಾರೆ. ರಾಹುಲ್ ಗಾಂಧಿಯವರ ಕಾರ್ಯಕ್ರಮದ ಬಲೆಗೆ ಗೀತಾ ಶಿವರಾಜ್ ಕುಮಾರ್ ಬಿದ್ದಿದ್ದಾರೆ. ಆದ್ರೆ ಗೀತಾ ಶಿವರಾಜ್ ಕುಮಾರ್ ಒಳ್ಳೆ ಘಳಿಗೆ ಒಳ್ಳೆ ಮುಹೂರ್ತ ನೋಡಿದ್ದೇನೆ. ಈಗ ಬಂದು ಸೇರಿದ್ದಾರೆ. ನನ್ನ ನಾಯಕ ಬಂಗಾರಪ್ಪ ಪುತ್ರಿ ಇವರು, ರಾಜ್ ಕುಮಾರ್ ಸೊಸೆ. ಇಡೀ ಕಾಂಗ್ರೆಸ್ ಪಕ್ಷದ ಪರವಾಗಿ ಗೀತಾ ಶಿವರಾಜ್ ಕುಮಾರ್ಗೆ ಸ್ವಾಗತ ಎಂದರು.
ಗೀತಾ ಶಿವರಾಜ್ ಕುಮಾರ್ ಅವರ ಕಿರಿಯ ಸಹೋದರ ಮಧು ಬಂಗಾರಪ್ಪ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ. ಸ್ವತಃ ಸಹೋದರ ಕುಮಾರ್ ಬಂಗಾರಪ್ಪ ಅವರ ವಿರುದ್ಧವೇ ಸೊರಬ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಕಿರಿಯ ಸಹೋದರನನ್ನು (ಮಧು ಬಂಗಾರಪ್ಪ) ಬೆಂಬಲಿಸುವುದಕ್ಕಾಗಿ ಗೀತಾ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಮಧು ಬಂಗಾರಪ್ಪ ಹಾಗೂ ಸಂಬಂಧಿಯಾಗಿರುವ ಭೀಮಣ್ಣ ನಾಯ್ಕ ಅವರ ಪರವಾಗಿ ಪ್ರಚಾರ ಮಾಡಲಿದ್ದಾರೆ. ಇನ್ನು ತಮ್ಮ ಪತ್ನಿ ಗೀತಾ ಅವರು ಕಾಂಗ್ರೆಸ್ ಸೇರ್ಪಡೆಯನ್ನು ನಟ ಶಿವರಾಜ್ ಕುಮಾರ್ ಅವರು ಸ್ವಾಗತಿಸಿದ್ದಾರೆ. ಅಲ್ಲದೇ ಪರ ಜೊತೆಗೆ ಪ್ರಚಾರಕ್ಕೆ ಹೋಗುವುದಾಗಿಯೂ ಹೇಳಿದ್ದಾರೆ.