ಬೆಂಗಳೂರು : ವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭಗಳಲ್ಲಿ ಅವರ ಪತ್ನಿ/ಪತಿ, ಮಗ ಮತ್ತು ಮಗಳು ಹಾಗೂ ಅವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭಗಳಲ್ಲಿ ಅವರ ಸಹೋದರ/ಸಹೋದರಿ ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಾಗಿರುತ್ತಾರೆ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.
ಈ ಕುರಿತು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ರನ್ನಯ ಸೇವೆಯಲ್ಲಿರುವಾಗಲೇ ಮೃತಪಡುವ ಸರ್ಕಾರಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಸದರಿ ನಿಯಮಗಳ ನಿಯಮ 2 (1) (ಎ) ಮತ್ತು (ಬಿ)ರಲ್ಲಿ ‘ಮೃತ ಸರ್ಕಾರಿ ನೌಕರರ ಅವಲಂಬಿತರು’ ಹಾಗೂ ‘ಕುಟುಂಬ’ ಪದಗಳನ್ನು ವ್ಯಾಖ್ಯಾನಿಸಲಾಗಿದೆ ಹಾಗೂ ನಿಯಮ 3ರಲ್ಲಿ ನೇಮಕಾತಿಗೆ ಅರ್ಹತೆ ಕುರಿತಂತೆ ನಿರ್ಧಿಷ್ಟಪಡಿಸಲಾಗಿದೆ. ವಿವಾಹಿತ ಹಾಗೂ ಅವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅನುಕಂಪದ ಆಧಾರದ ನೇಮಕಾತಿ ಪಡೆಯಲು ಅರ್ಹರಾದ ಅವಲಂಬಿತರ ಬಗ್ಗೆ ತಿಳಿಸಲಾಗಿದೆ.
ಇದರನ್ವಯ, ವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭಗಳಲ್ಲಿ ಅವರ ಪತ್ನಿ/ಪತಿ, ಮಗ ಮತ್ತು ಮಗಳು ಹಾಗೂ ಅವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭಗಳಲ್ಲಿ ಅವರ ಸಹೋದರ/ಸಹೋದರಿ ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಾಗಿರುತ್ತಾರೆ. ವಿಚ್ಛೇದಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ, ಅವರ ಪತ್ನಿ/ಪತಿ ಕಾನೂನಾತ್ಮಕವಾಗಿ ಸದರಿ ನೌಕರರಿಂದ ಬೇರ್ಪಡುವುದರಿಂದ, ಅವರಿಗೆ ಅನುಕಂಪದ ಆಧಾರದ ನೇಮಕಾತಿ ನೀಡಲು ಅವಕಾಶವಿರುವುದಿಲ್ಲವಾದರೂ, ವಿಚ್ಚೇದಿತ ನೌಕರರ ಮಕ್ಕಳು ಅವರಿಗೆ ಅಲವಂಬಿತರಾಗಿದ್ದಲ್ಲಿ ಹಾಗೂ ಅವರೊಂದಿಗೆ ವಾಸಿಸುತ್ತಿದ್ದಲ್ಲಿ, ಅವರಿಗೆ ಅನುಕಂಪದ ಆಧಾರದ ನೇಮಕಾತಿಯನ್ನು ನೀಡಬಹುದಾಗಿದೆ. ಆದರೆ, ವಿಚ್ಛೇದಿತ ಸರ್ಕಾರಿ ನೌಕರರು ಮೃತಪಟ್ಟಿದ್ದು, ಅವರಿಗೆ ಮಕ್ಕಳಿಲ್ಲದ ಸಂದರ್ಭಗಳಲ್ಲಿ, ಅವಿವಾಹಿತ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ಅನ್ವಯವಾಗುವಂತ ಅವರ ಸಹೋದರ/ಸಹೋದರಿಗೆ ಅನುಕಂಪದ ಆಧಾರದ ನೇಮಕಾತಿಯನ್ನು ನೀಡಬಹುದೇ ಎಂಬ ಬಗ್ಗೆ ಹಲವು ಇಲಾಖೆಗಳು ಸೃಷ್ಟಿಕರಣ ಕೋರುತ್ತಿವೆ.
ವಿಚ್ಛೇದಿತ ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟು ಅವರಿಗೆ ಮಕ್ಕಳಿದ್ದಲ್ಲಿ, ಅಂತಹ ಮಕ್ಕಳು ನೌಕರರಿಗೆ ಅವಲಂಬಿತರಾಗಿದ್ದು ಹಾಗೂ ಅವರೊಂದಿಗೆ ವಾಸಿಸುತ್ತಿದ್ದಲ್ಲಿ ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ವಿಚ್ಛೇದಿತ ನೌಕರರ ಸಹೋದರ/ಸಹೋದರಿಯು ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಾಗುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.