ಬೆಂಗಳೂರು : ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಕ್ಸೋ ಪ್ರಕರಣದಲ್ಲಿ ಕಳೆದ ಒಂದು ವರ್ಷದಿಂದ ಜೈಲಿನಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರ ಭವಿಷ್ಯ ಇಂದು ಹೈಕೋರ್ಟ್ ನಲ್ಲಿ ನಿರ್ಧಾರವಾಗಲಿದೆ.
ಕಳೆದ 2022ರ ಸೆಪ್ಟೆಂಬರ್ 1ರಿಂದ ಜೈಲಿನಲ್ಲಿರುವ ಮುರುಘಾಶ್ರೀ ಜಾಮೀನು ಅರ್ಜಿಯನ್ನು ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸಿತ್ತು. ಹೀಗಾಗಿ ಮುರುಘಾಶ್ರೀ ಪರ ವಕೀಲರು ಹೈಕೋರ್ಟ್ ಮೆಟ್ಟಲೇರಿದ್ದು, ಇಂದು ಶ್ರೀಗಳ ಭವಿಷ್ಯ ನಿರ್ಧಾರವಾಗಲಿದೆ. ಇಂದು ಹೈಕೋರ್ಟ್ ಮುರುಘಾಮಠದ ಮುರುಘಾಶ್ರೀ ಜಾಮೀನು ಅರ್ಜಿ ಕುರಿತು ತನ್ನ ಆದೇಶ ಪ್ರಕಟಿಸಲಿದ್ದು, ಶ್ರೀಗಳಿಗೆ ಜಾಮೀನು ಸಿಗಲಿದೆಯೇ ಅಥವಾ ಮತ್ತೆ ಜೈಲೇ ಗತಿಯೇ ಎನ್ನುವ ಕುತೂಹಲ ಮೂಡಿದೆ.
ಮರುಘಾ ಶರಣರ ಲೈಂಗಿಕ ಕಿರುಕುಳ ಪ್ರಕರಣದ ಹಿನ್ನೆಲೆ:
ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದ ಹಲವು ವಿದ್ಯಾರ್ಥಿನಿಯರಿಗೆ ಸ್ವಾಮೀಜಿಯವರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ ದೂರು ನೀಡಿದ್ದರು.ಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿ ನಿಲಯದಲ್ಲಿರುವ ನಮ್ಮನ್ನು ಸ್ವಾಮೀಜಿಗಳು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.
ಸ್ವಾಮೀಜಿಯವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ಅವರೇ ನಮ್ಮನ್ನು ಕಳುಹಿಸುತ್ತಿದ್ದರು. ಸ್ವಾಮೀಜಿ ಇದ್ದ ಸ್ಥಳಕ್ಕೆ ತೆರಳಿದರೆ ಅಲ್ಲಿ ನಮಗೆ ಮತ್ತು ಬರುವಂತೆ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಆರೋಪಿಸಿ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.ಇದಾದ ಬಳಿಕ ಪ್ರಕರಣವನ್ನು ಚಿತ್ರದುರ್ಗಕ್ಕೆ ವರ್ಗಾಯಿಸಿ ಫೋಕ್ಸೋ ಪ್ರಕರಣದಡಿ ಮುರುಘಾ ಶರಣರನ್ನು 2022ರ ಸೆಪ್ಟೆಂಬರ್ 1ರಂದು ಪೊಲೀಸರು ಬಂಧಿಸಿದ್ದರು. ತೀವೃ ವಿಚಾರಣೆ ಹಾಗೂ ವೈದ್ಯಕೀಯ ತಪಾಸಣೆ ಬಳಿಕ ಮುರುಘಾ ಶ್ರೀಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.