ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡುವ ಯೋಚನೆ ಇದೆಯೇ? ಎಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಶನಿವಾರ ಉಡುಪಿಗೆ ಆಗಮಿಸಲಿರುವ ಮುಖ್ಯಮಂತ್ರಿ ಅವರನ್ನು ಕಾರ್ಕಳ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ ಪ್ರಶ್ನಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಆಂಶಗಳ ಆಧಾರದಲ್ಲೇ ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿರುವ ಬಿಜೆಪಿ, ಜನರಿಗೆ ಬಿಟ್ಟಿ ಭಾಗ್ಯಗಳ ಭರವಸೆ ಕೊಟ್ಟು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಆ ಬಳಿಕ ರಾಜ್ಯದಿಂದ ಅಭಿವೃದ್ಧಿ ಎಂಬುದು ಮಾಯವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕನಿಷ್ಠ ಒಂದು ಹೊಸ ಮೋರಿ ನಿರ್ಮಾಣವೂ ಆಗಿಲ್ಲ. ಬಜೆಟ್‌ನಲ್ಲಿ ಕರಾವಳಿಯ ಉಭಯ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈ ಭಾಗದಲ್ಲಿ ಕಾಂಗ್ರೆಸ್ ಗೆದ್ದಿಲ್ಲ ಎಂಬ ಕಾರಣಕ್ಕೆ ಒಂದೇ ಒಂದು ಅಭಿವೃದ್ಧಿ ಯೋಜನೆ ಘೋಷಿಸದೆ ಸೇಡು ತೀರಿಸಿಕೊಂಡಿದ್ದಾರೆ. ಇದೇನಾ ನಿಮ್ಮ ಸಮಾಜವಾದ, ಸಹಬಾಳ್ವೆ, ಸಮಾನತೆ ಎಂದು ಪ್ರಶ್ನಿಸಿದ್ದಾರೆ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅದಕ್ಕೆ ವಾರ್ಷಿಕ 2500 ಕೋಟಿ ಅನ್ನು ಬಜೆಟ್‌ನಲ್ಲಿ ಮೀಸಲಿಡಲಾಗುವುದು. ಈ ಮೂಲಕ ಕರಾವಳಿಯಲ್ಲಿ ಬಂಡವಾಳ ಹೂಡಿಕೆ, ಉದ್ಯೊ?ಗ ಸೃಷ್ಟಿ, ಪ್ರವಾಸೋದ್ಯಮಕ್ಕೆ ಆದ್ಯತೆ ಕೊಡುತ್ತೇವೆ ಎಂದು ನೀವು ಜನರಿಗೆ ಕೊಟ್ಟಿರುವ ಪ್ರಣಾಳಿಕೆ ಇನ್ನೂ ಎದುರಲ್ಲೇ ಇದೆ. 2500 ಕೋಟಿ ಬಿಡಿ ಕನಿಷ್ಠ 2 ಕೋಟಿಯಾದರೂ ಕೊಟ್ಟಿದ್ದೀರಾ? ಪ್ರವಾಸೋದ್ಯಮ ಅಭಿವೃದ್ಧಿ ಮಾಡುವುದಾಗಿ ಹೇಳಿದ ನೀವು ಕರಾವಳಿಯ ಪ್ರವಾಸೋದ್ಯಮದ ಹೆಗ್ಗುರುತಾಗಬಹುದಾಗಿದ್ದ ಪರಶುರಾಮ ಥೀಮ್ ಪಾರ್ಕ್ ಅನುದಾನವನ್ನೇ ತಡೆಹಿಡಿದಿದ್ದೀರಿ. ಇದೇನಾ ನೀವು ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ರೀತಿ ಎಂದು ಪ್ರಶ್ನಿಸಿದ್ದಾರೆ.
ಪ್ರಣಾಳಿಕೆಯಲ್ಲಿ ಹೇಳಿದ ಮಂಗಳೂರಿನಲ್ಲಿ ಐಟಿ ಹಬ್, ಗಾರ್ಮೆಂಟ್ ಕೈಗಾರಿಕೆ ಹಬ್, 1 ಲಕ್ಷ ಉದ್ಯೋಗ ಯಾವಾಗ ಆಗುತ್ತದೆ? ಮೀನುಗಾರರಿಗೆ ನೀಡಿದ ಭರವಸೆಗಳನ್ನು ಯಾವಾಗ ಈಡೇರಿಸುತ್ತೀರಿ? ಬಿಲ್ಲವ ಮತ್ತು ಬಂಟ ಸಮುದಾಯದವರ ಅಭಿವೃದ್ಧಿಗಾಗಿ ವಾರ್ಷಿಕ ತಲಾ 250 ಕೋಟಿಯಂತೆ ಐದು ವರ್ಷದಲ್ಲಿ ತಲಾ 1250 ಕೋಟಿ ನೀಡುವ ವಾಗ್ದಾನ ನಿಮಗೆ ನೆನಪಿದೆಯಾ? ಬಜೆಟ್‌ನಲ್ಲಿ ಈ ಕುರಿತು ಉಲ್ಲೇಖವನ್ನೂ ಮಾಡಲಿಲ್ಲ. ನಿಮ್ಮ ಸರಕಾರ ಬಂದ ಮೇಲೆ ಹಿಂದುಗಳ ಶೋಷಣೆ ಮೇರೆ ಮೀರಿದೆ. ಹಿಂದು ಕಾರ್ಯಕರ್ತರ ಮೇಲೆ ಉದ್ದೇಶಪೂರ್ವಕವಾಗಿ ಸುಳ್ಳು ಕೇಸುಗಳನ್ನು ಜಡಿದು ಜೈಲಿಗಟ್ಟಲು ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದೀರಿ. ನಿಮ್ಮ ಈ ದೌರ್ಜನ್ಯವನ್ನು ಹಿಂದುಗಳು ಎಷ್ಟು ಕಾಲ ಸಹಿಸಿಕೊಳ್ಳಬೇಕು ಹೇಳಿ? ಈ ಜಿಲ್ಲೆಯಲ್ಲಿ ಮರಳುಗಾರಿಕೆ ಅಭಿವೃದ್ಧಿ ಕಾರ್ಯಕ್ರಮಗಳು ತೀರಾ ಕುಂಠಿತವಾಗಿದ್ದು ಕೂಲಿಕಾರ್ಮಿಕರು ಕಟ್ಟಡ ಕಾರ್ಮಿಕರು ದೈನಂದಿನ ಬದುಕಿಗೆ ಅಂಗಲಾಚುವ ಪರಿಸ್ಥಿತಿಯಲ್ಲಿದ್ದಾರೆ. ನೀವು ಉಡುಪಿ ಜಿಲ್ಲೆಗೆ ಬಂದಾದರೂ ಇದೆಲ್ಲವೂ ಸರಿಯಾಗಬಹುದು ಎಂಬ ಆಶಾಭಾವನೆಯಲ್ಲಿದ್ದೇವೆ ಎಂದು ಕುಟುಕಿದ್ದಾರೆ.