ಚಿಕ್ಕಮಗಳೂರು: ಹುಲಿ ಉಗುರು ಪ್ರಕರಣವು ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ.
ಈ ಪ್ರಕರಣದಲ್ಲಿ ಕಿರುತೆರೆ ರಿಯಾಲಿಟಿ ಶೋ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬಳಿಕ ಕರುನಾಡಿನಾದ್ಯಂತ ಹುಲಿ ಉಗುರಿನ ಕಂಟಕ ಶುರುವಾಗಿದೆ.
ಇದೀಗ ಹುಲಿ ಉಗುರು ಹೊಂದಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಅರಣ್ಯ ಇಲಾಖೆಯ ಅಧಿಕಾರಿಯ ವಿರುದ್ಧವೇ ಅಕ್ರಮ ಹುಲಿ ಉಗುರು ಹೊಂದಿರುವ ಆರೋಪ ಕೇಳಿಬಂದಿದೆ.
ಚಿಕ್ಕಮಗಳೂರಿನ ಖಾಂಡ್ಯಾದ ಇತಿಹಾಸ ಪ್ರಸಿದ್ಧ ಮಾರ್ಕಂಡೇಯ ದೇವಸ್ಥಾನದ ಇಬ್ಬರು ಅರ್ಚಕರು ಬಂಧನವಾಗಿರುವ ಬೆನ್ನಲ್ಲೇ ಸ್ವತಃ ಅರಣ್ಯ ಇಲಾಖೆಯ ಅಧಿಕಾರಿಯೇ ಹುಲಿ ಉಗುರು ಪೆಂಡೆಂಟ್ ಧರಿಸಿರುವ ಫೋಟೊ ಎಲ್ಲೆಡೆ ವೈರಲ್ ಆಗಿದೆ.
ಹುಲಿ ಉಗುರು ಧರಿಸಿದ ಆರೋಪ ಕಳಸದ ಡಿಆರ್‌ಎಫ್ಓ ದರ್ಶನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ದಾಖಲು ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಮೂಲದ ದರ್ಶನ್ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಅರೆನೂರು ಗ್ರಾಮದ ಸುಪ್ರೀತ್, ಅಬ್ದುಲ್ ಎಂಬವರು ದೂರು ನೀಡಿದ್ದಾರೆ.