ಬೆಂಗಳೂರು:ಈ ಹಿಂದೆ ನಿಗದಿಯಾದಂತೆ ರಾಜ್ಯ ಸರ್ಕಾರ ಆಸ್ತಿ ನೊಂದಣಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲು ಮುಂದಾಗಿದ್ದು, ಅಕ್ಟೋಬರ್ 1ರಿಂದ ಆಸ್ತಿ ನೊಂದಣಿ ಮಾರ್ಗಸೂಚಿ ದರ ಹೆಚ್ಚಳವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ತಿ ನೊಂದಣಿ ಮಾರ್ಗಸೂಚಿ ದರ ಏರಿಕೆ ಮಾಡುವ ಬಗ್ಗೆ ಈಗಾಗಲೇ ಚರ್ಚೆ ಮಾಡಿ ತೀರ್ಮಾನ ಮಾಡಲಾಗಿದೆ. ಪ್ರತಿವರ್ಷ ಆಸ್ತಿ ನೊಂದಣಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕೆಂಬ ನಿಯಮವಿದೆ. ಆದರೆ ಕಳೆದ ಹಲವು ವರ್ಷಗಳಿಂದ ದರ ಏರಿಕೆ ಮಾಡಿರಲಿಲ್ಲ. ಅದಕ್ಕಾಗಿ ನಾವು ಆಸ್ತಿ ನೊಂದಣಿ ಮಾರ್ಗಸೂಚಿ ದರ ಹೆಚ್ಚಳ ಮಾಡಿದ್ದು, ಅಕ್ಟೋಬರ್ 1ರಿಂದ ಹೊಸ ದರ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಎಲ್ಲಾ ಕಡೆ ಮಾರ್ಗಸೂಚಿ ದರ ಏರಿಕೆ ಇಲ್ಲ, ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳವಿದ್ದರೆ, ಅಂತಹ ಪ್ರದೇಶಗಳಲ್ಲಿ ದರ ಹೆಚ್ಚಳವಾಗುವುದಿಲ್ಲ, ಆದರೆ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರವಿರುವ ಪ್ರದೇಶಗಳಲ್ಲಿ ಆಸ್ತಿ ನೋಂದಣಿ ದರ ಹೆಚ್ಚಳವಾಗಲಿದೆ.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾದು ಹೋಗಿರುವ ಪ್ರದೇಶಗಳಲ್ಲಿ, ವಿಮಾನ ನಿಲ್ದಾಣಗಳು ನಿರ್ಮಾಣವಾದ ಪ್ರದೇಶಗಳಲ್ಲಿ ಹಾಗೂ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಐಟಿ ಬಿಟಿ ಕಂಪನಿಗಳು ಸ್ಥಾಪನೆಯಾಗುತ್ತಿರುವ ಪ್ರದೇಶಗಳಲ್ಲಿ ಮಾರ್ಗಸೂಚಿ ದರ ಕಡಿಮೆ ಇದೆ. ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ರಾಜ್ಯದಲ್ಲಿ ಸರಾಸರಿ ಶೇಕಡಾ 30 ಮಾರ್ಗಸೂಚಿ ದರ ಏರಿಕೆ ಆಗಲಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು. ಆಕ್ಷೇಪಣೆ ಪರಿಶೀಲಿಸಿ ಅಧಿಸೂಚನೆ ಹೊರಡಿಸಲಾಗುತ್ತದೆ. ಇನ್ನು ರಾಜ್ಯದಲ್ಲಿ ಮಾರ್ಗಸೂಚಿ ದರ ಏರಿಕೆಯಾದರೆ ವರ್ಷಕ್ಕೆ 2ಸಾವಿರ ಕೋಟಿ ರೂ ಆದಾಯ ಬರಲಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲ ಆಗಲಿದೆ. ಹೊಸದನ್ನು ಮಾಡಿದಾಗ ಪರ ವಿರೋಧ ವ್ಯಕ್ತವಾಗಬಹುದು. ಅದನ್ನು ನಾವು ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮಾರ್ಗಸೂಚಿ ದರ ಏರಿಕೆಯಿಂದ ಒಂದಷ್ಟು ವ್ಯತ್ಯಾಸ ಆಗಬಹುದು. ಆದರೆ ಅದು 2 ತಿಂಗಳ ಬಳಿಕ ಸರಿ ಆಗಲಿದೆ. ಆಸ್ತಿ ಮಾರಾಟದ ವೇಳೆ ಬ್ಲ್ಯಾಕ್ ಮನಿ ಬಳಕೆ ಆಗುತ್ತಿದೆ. ಅದಕ್ಕೆ ಅವಕಾಶ ಕೊಡಬಾರದು ಎಂಬುದು ನಮ್ಮ ತೀರ್ಮಾನವಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟಪಡಿಸಿದರು.




















