ಬೆಂಗಳೂರು: ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಕರ್ನಾಟಕ ಮಾಧ್ಯಮ ಅಕಾಡೆಮಿ ಸೇರಿದಂತೆ ನಾಲ್ಕು ಮಂಡಳಿ, ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರ ನಾಮನಿರ್ದೇಶವನ್ನು ರದ್ದುಗೊಳಿಸಿ ಆದೇಶಿಸಿದೆ.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಶ್ರೀ ಕಂಠೀರವ ಸ್ಟೂಡಿಯೋಸ್ ನಿಗಮ ನಿಯಮಿತ, ಕರ್ನಾಟಕ ಚಲನ ಚಿತ್ರ ಅಕಾಡಮಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಈ ಹಿಂದಿನ ಸರ್ಕಾರ ನೇಮಿಸಿತ್ತು, ಇದೀಗ ಎಲ್ಲಾ ನೇಮಕವನ್ನು ನೂತನ ಸರ್ಕಾರ ರದ್ದುಗೊಳಿಸಿದೆ
ನಿನ್ನೆಯಷ್ಟೇ ರಾಜ್ಯ ಸರ್ಕಾರವು ಕೆಲ ನಿಗಮ- ಮಂಡಳಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಅಧ್ಯಕ್ಷರು, ಸದಸ್ಯರುಗಳ ನೇಮಕಾತಿಯನ್ನು ರದ್ದುಗೊಳಿಸಿತ್ತು.ಆದರೆ ಈ ನಾಲ್ಕು ಮಂಡಳಿ, ಅಕಾಡೆಮಿಗಳ ನಾಮನಿರ್ದೇಶನವನ್ನು ರದ್ದುಗೊಳಿಸಿರಲಿಲ್ಲ. ಇದೀಗ ಸರ್ಕಾರ ಇವುಗಳ ನಾಮನಿರ್ದೇಶವನ್ನು ರದ್ದುಗೊಳಿಸಿ ಆದೇಶಿಸಿದೆ. ನೂತನ ಸರ್ಕಾರ ಬಂದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಿಗಮ ಮಂಡಳಿಗಳ ಹುದ್ದೆಗಳಿಗೆ ಕಣ್ಣಿಟ್ಟಿದ್ದು ಈಗಾಗಲೇ ಲಾಬಿ ಶುರುವಾಗಿದೆ