ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆಯ ಅಡಿಯಲ್ಲಿ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಆದಿತ್ಯ L1 ಹೊತ್ತ ಪಿಎಸ್‌ಎಲ್‌ವಿ ರಾಕೆಟ್ನ (PSLV-XLC57) ಉಡಾವಣೆ ಯಶಸ್ವಿಯಾಗಿದೆ ಎಂದು ಭಾರಾತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ ಇಸ್ರೋ (ISRO) ತಿಳಿಸಿದೆ.
ಚಂದ್ರಯಾನದ ದೊಡ್ಡಮಟ್ಟದ ಯಶಸ್ಸಿನ ಬಳಿಕ ಇಸ್ರೋದ ಸೌರಯಾನ ಆರಂಭವಾಗಿದೆ. ಬಾಹ್ಯಾಕಾಶದಲ್ಲಿ ಭಾರತದ ನೌಕೆಯ ಅತ್ಯಂತ ದೂರದ ಪ್ರಯಾಣವನ್ನು ಆದಿತ್ಯ ಎಲ್1 ಮಿಷನ್ ಆರಂಭ ಮಾಡಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 2ನೇ ಉಡ್ಡಯನ ಕೇಂದ್ರದಿಂದ 11.50ಕ್ಕೆ ಸರಿಯಾಗಿ ಆದಿತ್ಯ ಎಲ್1 ನೌಕೆಯನ್ನು ಹೊತ್ತ ಪಿಎಸ್‌ಎಲ್‌ವಿ-ಸಿ57 ರಾಕೆಟ್ ನಭಕ್ಕೆ ಹಾರಿತು. ಅದರೊಂದಿಗೆ ಭಾರತದ ಹಿರಿಮೆಯನ್ನು ಸೂರ್ಯನ ಎತ್ತರಕ್ಕೆ ಇಸ್ರೋ ಏರಿಸಿದೆ.
ಇನ್ನು 126 ದಿನಗಳ ಪ್ರಯಾಣದ ಬಳಿಕ ಆದಿತ್ಯ ಎಲ್1 ನೌಕೆ ತನ್ನ ನಿಗದಿತ ಗಮ್ಯಸ್ಥಾನವಾದ ಭೂಮಿ ಹಾಗೂ ಸೂರ್ಯನ ನಡುವಿನ ಎಲ್1 ಅನ್ನು ತಲುಪಲಿದೆ. ಅದಕ್ಕೂ ಮುನ್ನ ಆದಿತ್ಯ ಎಲ್1 ಭೂಮಿಯ ಸುತ್ತ 16 ದಿನಗಳ ಕಾಲ ಸಂಚರಿಸಲಿದ್ದು, 5 ಕಕ್ಷೆ ಏರಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ. ಆದಿತ್ಯ ಎಲ್1 ಮಿಷನ್ ಆರಂಭಿಸುವುದರೊಂದಿಗೆ ಸೂರ್ಯನ ಅಧ್ಯಯನಕ್ಕಾಗಿ ನೌಕೆಯನ್ನು ಕಳಿಸಿಕೊಟ್ಟ ಐದನೇ ದೇಶ ಹಾಗೂ 6ನೇ ಬಾಹ್ಯಾಕಾಶ ಸಂಸ್ಥೆ ಭಾರತವಾಗಿದೆ. ಇದಕ್ಕೂ ಮುನ್ನ ಅಮೆರಿಕ, ಜರ್ಮನಿ, ರಷ್ಯಾ ಹಾಗೂ ಚೀನಾ ದೇಶಗಳು ನೌಕೆಯನ್ನು ಕಳಿಸಿದ್ದವು. ಯುರೋಪಿಯನ್ ಸ್ಪೇಸ್ ಏಜೆನ್ಸಿ ಕೂಡ ತನ್ನ ನೌಕೆಯನ್ನು ಕಳಿಸಿದೆ.