Share this news

ನವದೆಹಲಿ (ಜೂ.19): 10 ವರ್ಷಕ್ಕಿಂತಲೂ ಹಳೆಯ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್  ಮಾಡುವುದು ಕಡ್ಡಾಯ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದ್ದು, ಯಾವುದೇ ಶುಲ್ಕವಿಲ್ಲದೆ ಅಪ್ಡೇಟ್ ಮಾಡಲು ಜೂನ್ 14ರವರೆಗೆ ಗಡುವು ನೀಡಿತ್ತು.

ಆದರೆ, ಈಗ ಈ ಗಡುವನ್ನು 2023ರ ಸೆಪ್ಟೆಂಬರ್ 14ರ ತನಕ ಅಂದರೆ ಇನ್ನು ಮೂರು ತಿಂಗಳ ಕಾಲ ವಿಸ್ತರಿಸಿದೆ. ಈ ಅಂತಿಮ ಗಡುವಿನೊಳಗೆ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ಇತರ ಮಾಹಿತಿಗಳನ್ನು ಅಪ್ಡೇಟ್ ಮಾಡುವುದು ಕಡ್ಡಾಯ. ಮೈ ಆಧಾರ್ ಪೋರ್ಟಲ್ ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು.  ಈ ಸೌಲಭ್ಯ ಮೈ ಆಧಾರ್ ಪೋರ್ಟಲ್ ನಲ್ಲಿ ಮಾತ್ರ ಲಭ್ಯವಿದೆ.

ಈ ಹಿಂದೆ ಆಧಾರ್ ಪೋರ್ಟಲ್ ನಲ್ಲಿ ಈ ಮಾಹಿತಿಗಳನ್ನು ಅಪ್ಡೇಟ್ ಮಾಡಲು 25ರೂ. ಶುಲ್ಕ ಪಾವತಿಸಬೇಕಿತ್ತು. ಆಧಾರ್ ಕೇಂದ್ರಗಳಲ್ಲಿ ಈಗಲೂ ಈ ಕೆಲಸಕ್ಕೆ 50ರೂ. ಶುಲ್ಕ ಪಾವತಿಸಬೇಕು. 10 ವರ್ಷಕ್ಕಿಂತಲೂ ಹಳೆಯ ಆಧಾರ್ ಕಾರ್ಡ್ ಗಳನ್ನು ಹೊರತುಪಡಿಸಿ ವ್ಯಕ್ತಿಯ ಬಯೋಮೆಟ್ರಿಕ್ ಡೇಟಾ, ವಿಳಾಸ, ಇಮೇಲ್, ಫೋನ್ ನಂಬರ್ ಹಾಗೂ ಇತರ ಮಾಹಿತಿಗಳಲ್ಲಿ ಯಾವುದೇ ಬದಲಾವಣೆ ಆಗಿದ್ದರೆ ಅವುಗಳನ್ನು ಆಧಾರ್ ನಲ್ಲಿ ಅಪ್ಡೇಟ್ ಮಾಡುವುದು ಅಗತ್ಯ. ಇನ್ನು ಮಗುವಿಗೆ ಆಧಾರ್ ಕಾರ್ಡ್ ಮಾಡಿಸಿದ್ದರೆ ಐದು ವರ್ಷವಾದಾಗ ಹಾಗೂ 15 ವರ್ಷವಾದಾಗ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಅಗತ್ಯ. 

ನೀವು ಮೈ ಆಧಾರ್ ಪೋರ್ಟಲ್ ನಲ್ಲಿ ಆಧಾರ್ ಕಾರ್ಡ್  ಮಾಹಿತಿಗಳನ್ನು ಅಪ್ಡೇಟ್ ಮಾಡಿದ ಏಳು ಕೆಲಸದ ದಿನಗಳಲ್ಲಿ ನಿಮ್ಮ ಆಧಾರ್ ನಲ್ಲಿ ಈ ಮಾಹಿತಿಗಳು ನಮೂದಾಗುತ್ತವೆ. 

ಆಧಾರ್ ನಲ್ಲಿ ಮಾಹಿತಿ ಅಪ್ಡೇಟ್ ಮಾಡುವುದು ಹೇಗೆ?
*ಯುಐಡಿಎಐ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
*myaadhaar ಮೇಲೆ ಕ್ಲಿಕ್ ಮಾಡಿ.
*ಆ ಬಳಿಕ ‘Update Aadhaar’ಆಯ್ಕೆ ಮಾಡಿ.
*ನಿಮ್ಮ ಆಧಾರ್ ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ.
*ಆ ಬಳಿಕ ‘Send OTP’ಬಟನ್ ಮೇಲೆ ಕ್ಲಿಕ್ ಮಾಡಿ.
*ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿ ನಮೂದಿಸಿ.
*Login ಬಟನ್ ಮೇಲೆ ಕ್ಲಿಕ್ ಮಾಡಿ.
*ನಿಮಗೆ ಯಾವ ಮಾಹಿತಿಯನ್ನು ನವೀಕರಿಸಬೇಕು ಅದನ್ನು ಆಯ್ಕೆ ಮಾಡಿ. ಉದಾಹರಣೆಗೆ ವಿಳಾಸ ಬದಲಾಯಿಸಬೇಕಿದ್ದರೆ ‘Address Update’ ಆಯ್ಕೆ ಮಾಡಿ.
*ಈಗ ನಿಮ್ಮ ವಿಳಾಸ ದೃಢೀಕರಣ ದಾಖಲೆಯ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿ.
*ಆ ಬಳಿಕ ‘Submit’ಬಟನ್ ಮೇಲೆ ಕ್ಲಿಕ್ ಮಾಡಿ.
*ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಅಪ್ಡೇಟ್ ರಿಕ್ವೆಸ್ಟ್ ಸಂಖ್ಯೆ (URN) ಬರುತ್ತದೆ. 

ಬೇಕಿದ್ದರೆ ನೀವು ನಿಮ್ಮ ಸೇವಾ ಮನವಿ ಸಂಖ್ಯೆ (SRN) ಬರೆದುಕೊಳ್ಳಬಹುದು. ಇದ್ರಿಂದ ನಿಮಗೆ ನಿಮ್ಮ ಅರ್ಜಿಯ ಸ್ಟೇಟಸ್ ಟ್ರ್ಯಾಕ್ ಮಾಡಲು ಸುಲಭವಾಗುತ್ತದೆ. 

 

ಆಧಾರ್ 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಕೇಂದ್ರ ಸರ್ಕಾರ ಇದನ್ನು ದೇಶದ ನಾಗರಿಕರಿಗೆ ನೀಡುತ್ತದೆ. ಆಧಾರ್ ಅನ್ನು ದೇಶದಲ್ಲಿ ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಂಪರ್ಕಕ್ಕೆ, ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು ಹಾಗೂ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಅತ್ಯಗತ್ಯ. ಒಟ್ಟಾರೆ ಇಂದು ಯಾವುದೇ ಒಂದು ಕೆಲಸಕ್ಕೆ ಹೋದ್ರೂ ಆಧಾರ್ ಕಾರ್ಡ್ ಅಗತ್ಯ.

Leave a Reply

Your email address will not be published. Required fields are marked *